ನಾಡಹಬ್ಬ ಮೈಸೂರು ದಸರಾ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಯುವ ಮನಸ್ಸುಗಳ ಸೃಜನಶೀಲತೆಯ ಚಿತ್ತಾರ ಹಾಗೂ ಸಂಭ್ರಮದ ಕ್ಷಣಗಳಿಗೆ ಮಾನಸಗಂಗೋತ್ರಿ ಬಯಲು ರಂಗಮಂದಿರ ಸಜ್ಜುಗೊಂಡಿದೆ.
ಸೆಪ್ಟೆಂಬರ್ 10ರಿಂದ 17ರವರೆಗೆ ಪ್ರತಿದಿನ ಸಂಜೆ 5ರಿಂದ ರಾತ್ರಿ 10ರವರೆಗೆ ಯುವ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಮನರಂಜಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ವೇದಿಕೆ ಅಲಂಕರಿಸಲ್ಪಟ್ಟಿದ್ದು, ದಾರಿಭಾಗವನ್ನೂ ವಿದ್ಯುತ್ ದೀಪಗಳಿಂದ ಹೊಳೆಯುವಂತೆ ಮಾಡಲಾಗಿದೆ.
ಈ ಬಾರಿ 300ಕ್ಕೂ ಹೆಚ್ಚು ಕಲಾ ತಂಡಗಳು ಪಾಲ್ಗೊಳ್ಳಲಿದ್ದು, ಸಾವಿರಾರು ವಿದ್ಯಾರ್ಥಿಗಳು ಅಂತಿಮ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ಪ್ರತಿದಿನವೂ 60 ತಂಡಗಳು ತಮ್ಮ ಕಲೆ ಪ್ರದರ್ಶಿಸಲಿವೆ. ಸೆಪ್ಟೆಂಬರ್ 10ರಂದು ಬುಧವಾರ ಸಂಜೆ 4 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಯುವರಾಜಕುಮಾರ್ ಮತ್ತು ಅಮೃತಾ ಅಯ್ಯಂಗಾರ್ ವಿಶೇಷ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.
ಉದ್ಘಾಟನೆಯ ನಂತರ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ತಂಡ ಸ್ವರಭಾರತಿ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ಸಂಭ್ರಮಕ್ಕೆ ಚಾಲನೆ ನೀಡಲಿದೆ. ಮೊದಲ ದಿನದಲ್ಲಿ 25 ತಂಡಗಳು ತಮ್ಮ ಪ್ರದರ್ಶನಗಳನ್ನು ನೀಡಲಿವೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




