Haveri News: ಹಾನಗಲ್ : ತಾಲೂಕಿನ ಶಾಸಕ ಶ್ರೀನಿವಾಸ ಮಾನೆ ಅವರ 52ನೇ ಜನ್ಮದಿನದ ಅಂಗವಾಗಿ ಬುಧವಾರ ಹಾನಗಲ್‌ನಲ್ಲಿ ಆಯೋಜಿಸಿದ್ದ ಭಾವೈಕ್ಯ ರಕ್ತ ತುಲಾಭಾರ ಹಾಗೂ ಬೃಹತ್ ರಕ್ತದಾನ ಶಿಬಿರಗಳು ವಿಶೇಷ ಗಮನ ಸೆಳೆದವು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳ ಸಮ್ಮುಖದಲ್ಲಿ ನಡೆದ ತುಲಾಭಾರ ಕಾರ್ಯಕ್ರಮ ಧಾರ್ಮಿಕ ಸೌಹಾರ್ದತೆ, ಸಾಮರಸ್ಯ ಮತ್ತು ಭಾವೈಕ್ಯದ ಸಂದೇಶ ಸಾರಿತು.
901 ಯುನಿಟ್ ರಕ್ತ ಸಂಗ್ರಹ
ಹಾನಗಲ್, ಬೊಮ್ಮನಹಳ್ಳಿ, ಬೆಳಗಾಲಪೇಟೆ, ಆಡೂರು, ಅಕ್ಕಿಆಲೂರು, ತಿಳವಳ್ಳಿ, ಹೀರೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿತ್ತು. ಇದಲ್ಲದೆ, ಹುಬ್ಬಳ್ಳಿಯ ಮರಾಠಾ ಭಾರತಿ ಕಲ್ಯಾಣ ಮಂಟಪ ಹಾಗೂ ಧಾರವಾಡದ ಬಿ.ಡಿ. ಜತ್ತಿ ಹೋಮಿಯೋಪತಿ ಆಸ್ಪತ್ರೆಯಲ್ಲಿಯೂ ಶಾಸಕ ಮಾನೆ ಅವರ ಅಭಿಮಾನಿಗಳು ರಕ್ತದಾನ ಮಾಡಿದರು.
ಶಾಸಕರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಯುವಕರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಸಮಾಜಮುಖಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಯಿತು. ಬೆಳಗ್ಗೆಯಿಂದಲೇ ವಿವಿಧ ಕೇಂದ್ರಗಳಿಗೆ ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಆಗಮಿಸಿ ರಕ್ತದಾನ ಮಾಡಿದರು.
ಒಟ್ಟಾರೆ ವಿವಿಧ ಶಿಬಿರಗಳಲ್ಲಿ 901 ಯುನಿಟ್ ರಕ್ತ ಸಂಗ್ರಹವಾಗಿದ್ದು, ಸಾರ್ವಜನಿಕರ ಉತ್ತಮ ಸ್ಪಂದನೆಗೆ ಆಯೋಜಕರು ಸಂತಸ ವ್ಯಕ್ತಪಡಿಸಿದರು.
ಸದಾಶಿವ ಮಂಗಳ ಭವನದಲ್ಲಿ ಭಾವೈಕ್ಯ ರಕ್ತ ತುಲಾಭಾರ
ಬುಧವಾರ ಸಂಜೆ ಹಾನಗಲ್‌ನ ಸದಾಶಿವ ಮಂಗಳ ಭವನದಲ್ಲಿ ನಡೆದ ಭಾವೈಕ್ಯ ರಕ್ತ ತುಲಾಭಾರ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಧರ್ಮಗುರುಗಳು ಪಾಲ್ಗೊಂಡು ಸೌಹಾರ್ದತೆಯ ಸಂದೇಶ ನೀಡಿದರು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.




