ದಸರಾ ಸಮಾರಂಭ ಮುಗಿದರೂ ಮೈಸೂರಿನ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆಯಾಗುವುದಿಲ್ಲ. ವಿಶೇಷವಾಗಿ ದಸರಾ ದೀಪಾಲಂಕಾರ ವೀಕ್ಷಣೆಗೆ ಪ್ರವಾಸಿಗರು ರಾತ್ರಿ ವೇಳೆಯಲ್ಲೂ ಮೈಸೂರಿಗೆ ಹರಿದು ಬರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಆಹಾರ ಮೇಳದ ಅವಧಿಯನ್ನು ವಿಸ್ತರಿಸಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜಂಬೂ ಸವಾರಿ ದಿನದಂದೇ ಆಹಾರ ಮೇಳ ಅಂತ್ಯಗೊಳ್ಳುತ್ತಿದ್ದರೆ, ಈ ಬಾರಿ ಮೂರು ದಿನ ಹೆಚ್ಚುವರಿ ನೀಡಲಾಗಿದೆ. ಇದರಿಂದಾಗಿ ವಾರಾಂತ್ಯದಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರು ತಮ್ಮ ಇಷ್ಟದ ಆಹಾರ ಸವಿಯನ್ನು ಮೇಳದಲ್ಲಿ ಸವಿಯುವ ಅವಕಾಶ ಪಡೆಯಲಿದ್ದಾರೆ.
ಸೆಪ್ಟೆಂಬರ್ 22ರಂದು ದಸರಾ ಮಹೋತ್ಸವ ಉದ್ಘಾಟನೆಯ ಜೊತೆಗೆ ಆಹಾರ ಮೇಳಕ್ಕೂ ಚಾಲನೆ ದೊರಕಲಿದೆ. ಮೂಲತಃ ಅಕ್ಟೋಬರ್ 2ರಂದು ಜಂಬೂ ಸವಾರಿ ದಿನದವರೆಗೂ ಮೇಳ ನಡೆಯಬೇಕಾಗಿದ್ದರೂ, ಈಗ ಅಕ್ಟೋಬರ್ 5ರವರೆಗೆ ಮುಂದುವರಿಯಲಿದೆ. ಹೀಗಾಗಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 5ರವರೆಗೆ ಒಟ್ಟು 15 ದಿನಗಳ ಕಾಲ ಆಹಾರ ಮೇಳ ಜರುಗಲಿದೆ ಎಂದು ಆಹಾರ ಮೇಳ ಸಮಿತಿಯ ಕಾರ್ಯಾಧ್ಯಕ್ಷರಾದ ಹೂಟಗಳ್ಳಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.
ಕಳೆದ ಬಾರಿಗೆ ನಡೆದಂತೆಯೇ ಈ ಬಾರಿಯೂ ಮಹಾರಾಜ ಕಾಲೇಜು ಮೈದಾನದಲ್ಲೇ ಆಹಾರ ಮೇಳ ನಡೆಯಲಿದೆ. ಒಟ್ಟು 120 ಮಳಿಗೆಗಳನ್ನು ತೆರೆಯುವ ವ್ಯವಸ್ಥೆ ಮಾಡಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




