Banavasi News: ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶಕ್ಕೆ; ಮಹೇಂದ್ರ ಸುಪ್ರೊ ವಾಹನ ಜಪ್ತಿ

Uttara Kannada News: ಬನವಾಸಿ: ಅನ್ನಭಾಗ್ಯ ಯೋಜನೆಯ ಸರ್ಕಾರಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮಹೇಂದ್ರ ಸುಪ್ರೊ ವಾಹನವನ್ನು ಬನವಾಸಿ ಪೊಲೀಸರು ವಶಕ್ಕೆ ಪಡೆದು, 33 ಚೀಲಗಳಲ್ಲಿ ತುಂಬಿದ್ದ ಒಟ್ಟು 1 ಟನ್ 750 ಕೆ.ಜಿ 4 ಗ್ರಾಂ (ಸುಮಾರು 17.5 ಕ್ವಿಂಟಲ್) ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ ಘಟನೆ ಜುಲೈ 26ರಂದು ರಾತ್ರಿ ಬನವಾಸಿಯ ದಾಸನಕೊಪ್ಪ ಕ್ರಾಸ್ ಬಳಿ ನಡೆದಿದೆ.

ತಹಶೀಲ್ದಾರರ ಸೂಚನೆಯ ಮೇರೆಗೆ ಆಹಾರ ಇಲಾಖೆಯ ಸಿಬ್ಬಂದಿ ಹಾಗೂ ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತಪ್ಪ ಕುಂಬಾರ್ ನೇತೃತ್ವದ ಪೊಲೀಸ್ ತಂಡ ಜಂಟಿ ಕಾರ್ಯಾಚರಣೆ ನಡೆಸಿ, ಮಹೇಂದ್ರ ಸುಪ್ರೊ ವಾಹನವನ್ನು ತಡೆದು ಪರಿಶೀಲನೆ ನಡೆಸಿತು. ಈ ವೇಳೆ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನ್ನಭಾಗ್ಯ ಯೋಜನೆಯ 33 ಪ್ಲಾಸ್ಟಿಕ್ ಚೀಲಗಳಲ್ಲಿದ್ದ ಸರ್ಕಾರಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿರುವುದು ಪತ್ತೆಯಾಯಿತು.

ವಾಹನ ಚಾಲಕನಾದ ಸಚಿನ್ ತಂದೆ ನಾಗರಾಜ ಗೌಡ (26), ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ಕೊರಕೋಡ–ಕುಪಗಡ್ಡೆ ನಿವಾಸಿಯಾಗಿದ್ದು, ಬನವಾಸಿ ಕೋರ್ಲಕಟ್ಟ ಪ್ರದೇಶದಲ್ಲಿ ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸೊರಬಾ ಕಡೆಗೆ ಸಾಗಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಜಪ್ತಿ ಮಾಡಿದ 1 ಟನ್ 750 ಕೆ.ಜಿ 4 ಗ್ರಾಂ ತೂಕದ ಪಡಿತರ ಅಕ್ಕಿಯ ಮೌಲ್ಯ ₹59,501.36 ಎಂದು ಅಂದಾಜಿಸಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಮಹೇಂದ್ರ ಸುಪ್ರೊ ವಾಹನದ ಮೌಲ್ಯ ₹1.20 ಲಕ್ಷ ಎಂದು ದಾಖಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಿರಸಿ ತಹಶೀಲ್ದಾರ ಕಚೇರಿಯ ಆಹಾರ ನಿರೀಕ್ಷಕಿ ಕವಿತಾ ಎಸ್. ಪಾಟಣಕರ ಅವರು ಪರಿಶೀಲನೆ ನಡೆಸಿ, ಜಪ್ತಿ ಮಾಡಿದ ಅಕ್ಕಿಯು ಅನ್ನಭಾಗ್ಯ ಯೋಜನೆಯ ಸರ್ಕಾರಿ ಪಡಿತರ ಅಕ್ಕಿಯೇ ಎಂಬುದನ್ನು ಖಚಿತಪಡಿಸಿ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಆರೋಪಿ ಸಚಿನ್ ನಾಗರಾಜ ಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author