ಸ್ಯಾಂಡಲ್ವುಡ್ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಕೌಟುಂಬಿಕ ಕಲಹ ಬೀದಿಗೆ ಬಂದಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ, ನಾರಾಯಣ್ ಕುಟುಂಬಸ್ಥರ ಮೇಲೆ ವರದಕ್ಷಿಣೆ ಕೇಸ್ ದಾಖಲಾಗಿದೆ. ಸೊಸೆ ಪವಿತ್ರಾ ದೂರು ಹಿನ್ನೆಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
2021ರಲ್ಲಿ ಎಸ್.ನಾರಾಯಣ್ ಪುತ್ರ ಪವನ್ ಹಾಗೂ ಪವಿತ್ರಾ ಮದುವೆ ಅದ್ದೂರಿಯಾಗಿ ನಡೆದಿತ್ತು. ಪವನ್ ಡಿಗ್ರಿಯಾಗಿರದ ಕಾರಣ, ಕೆಲಸ ಇರ್ಲಿಲ್ಲ. ಹೀಗಾಗಿ ಮನೆಯಲ್ಲೇ ಇದ್ರಂತೆ. ಆರ್ಥಿಕ ಸಂಕಷ್ಟ ಇದ್ದಿದ್ರಿಂದ ಪವಿತ್ರಾರೇ ಮನೆ ನಡೆಸುತ್ತಿದ್ರಂತೆ.
ಕಲಾಸಾಮ್ರಾಟ್ ಟೀಂ ಅಕಾಡೆಮಿ ಆರಂಭಿಸಲು ಹಣ ಕೇಳಿದ್ರು. ಆಗ ನಾನು ತಾಯಿಯ ಒಡವೆಯನ್ನು ಅಡವಿಟ್ಟು ಹಣ ಕೊಟ್ಟಿದ್ದೆ. ಆದರೆ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಯಿತು. ಬಳಿಕ ತಮ್ಮ ಹೆಸರಲ್ಲೇ 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್ಗೆ ನೀಡಿದ್ದರಂತೆ. ಆದರೂ, ಪವಿತ್ರಾರನ್ನೇ ಮನೆಯಿಂದ ಹೊರಹಾಕಿದ್ದಾರಂತೆ.
ಆದರೆ, ನಾಲ್ಕು ವರ್ಷ ಕಳೆಯುವುದರೊಳಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಾರಾಯಣ್ ಅವರ ಪತ್ನಿ ಭಾಗ್ಯವತಿ ಹಾಗೂ ಮಗ ಪವನ್ ವಿರುದ್ಧ ಪವಿತ್ರಾ ದೂರು ನೀಡಿದ್ದಾರೆ. ಮದುವೆಯಲ್ಲಿ ವರದಕ್ಷಿಣೆ ಕೊಟ್ಟರೂ, ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ ಮತ್ತು ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾರೆಂದು, ಪವಿತ್ರಾ ಆರೋಪಿಸಿದ್ದಾರೆ.
ನಿರ್ದೇಶಕ ಎಸ್. ನಾರಾಯಣ್ ಅವರು ಸೊಸೆಯ ಆರೋಪವನ್ನು ತಳ್ಳಿಹಾಕಿದ್ದಾರೆ. ಮಗ-ಸೊಸೆ ಪ್ರೀತಿಸಿ ಮದುವೆಯಾಗಿದ್ರು. ಆರಂಭದಲ್ಲಿ ಇಷ್ಟ ಇರ್ಲಿಲ್ಲ. ಆದರೂ ಒಪ್ಪಿಕೊಂಡಿದ್ದೆವು. ಆಕೆ ಮನೆ ಬಿಟ್ಟು ಹೋಗಿ 14 ತಿಂಗಳಾಗಿದೆ. ಈಗ ದೂರು ಕೊಟ್ಟಿದ್ದಾರೆ. ಅವರ ಆರೋಪಗಳನ್ನು ಒಪ್ಪುವುದಿಲ್ಲ. ಕಾನೂನು ಹೋರಾಟ ಮಾಡ್ತೇವೆ. ವರದಕ್ಷಿಣೆ ಕಿರುಕುಳ ನೀಡಿಲ್ಲ. ಅವರು ತರುವ ದುಡ್ಡಿನಲ್ಲಿ ಬದುಕುವ ಅವಶ್ಯಕತೆ ನನಗಿಲ್ಲ ಅಂತಾ, ಎಸ್. ನಾರಾಯಣ್ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಎಲ್ಲಾ ಆರೋಪಗಳ ಬಗ್ಗೆ ಎಸ್. ನಾರಾಯಣ್ ಅವರು ಸುದ್ದಿಗೋಷ್ಠಿ ಕರೆಯುವ ಸಾಧ್ಯತೆ ಇದೆ.

