Hubli News: ಹುಬ್ಬಳ್ಳಿ: ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಧರ್ಮದ ಪ್ರತಿಪಾದಕರಲ್ಲಿ ಮೂರ್ನಾಲ್ಕು ಕವಲುಗಳಾಗಿವೆ. ಒಬ್ಬೊಬ್ಬರು ಒಂದೊಂದು ವಾದ ಮಂಡಿಸುತ್ತಿರುವುದರಿಂದ ಸಮೀಕ್ಷೆಯ ಜಾತಿ, ಧರ್ಮದ ಕಾಲಂನಲ್ಲಿ ಏನು ನಮೂದಿಸಬೇಕು ಎಂಬ ಬಗ್ಗೆ ವೀರಶೈವ, ಲಿಂಗಾಯತ ಹಾಗೂ ಉಪ ಪಂಗಡಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.
ಇದರ ಮಧ್ಯೆ ನಗರದ ನೆಹರೂ ಮೈದಾನದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಸೆ.19ರಂದು ಶುಕ್ರವಾರ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಸಮಾವೇಶಕ್ಕೆ ವೇದಿಕೆ ಸಿದ್ದಪಡಿಸಲಾಗಿದೆ. ಇದಕ್ಕಾಗಿ ಎಲ್ಲಾ ಸಿದ್ದತೆ ನಡೆದಿದೆ.
ಈ ಕುರಿತು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕರ್ನಾಟಕ ಟಿವಿ ಗೇ ಪ್ರತಿಕ್ರಿಯಿಸಿ, “ನಾಳೆ ನಡೆಯುವ ಏಕತಾ ಸಮಾವೇಶದಲ್ಲಿ 1 ಸಾವಿರ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಮೂರು ಸಾವಿರ ಮಠದಿಂದ 2 ಗಂಟೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 200ಕ್ಕೂ ಅಧಿಕ ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಇತಿಹಾಸದಲ್ಲಿ ಮೊದಲೇ ಬಹುದೊಡ್ಡ ವೇದಿಕೆಯಾಗಿದೆ. 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 1 ಲಕ್ಷ ಜನರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ” ಎಂದು ತಿಳಿಸಿದರು.
“ಸಮಾವೇಶದ ಮೂಲ ಗುರಿ ಸಮಾಜವನ್ನು ಒಂದು ಮಾಡುವದು. ವೀರಶೈವ ಬೇರೆಯಲ್ಲ, ಲಿಂಗಾಯತ ಬೇರೆಯಲ್ಲ. ವೀರಶೈವ ಲಿಂಗಾಯತ ಒಂದು ವಿಶ್ವವೇ ಬಂಧು ಎಂಬ ಘೋಷ ವಾಕ್ಯ ಹೊಂದಿದ್ದೇವೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮಾಡುವವರಲ್ಲಿ ವಿನಂತಿಸುವದೇನೆಂದರೆ ನಾವು ಮೊದಲು ಒಂದಾಗೋಣ, ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜವನ್ನು ಒಂದು ಮಾಡಲಾಗುವುದು” ಎಂದರು.
ಈ ನಡುವೆ ವೀರಶೈವ ಲಿಂಗಾಯತ ಧರ್ಮದ ಬೇಡಿಕೆ ತಿರಸ್ಕಾರವಾಗಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೇಳಿದರೆ, ಎರಡನ್ನೂ ಇಟ್ಟುಕೊಂಡು ಹೋಗಿದ್ದಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿಲ್ಲ. ಈಗ ನಾವು ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಹೋರಾಟ ನಡೆಸುವುದೇ ನಮ್ಮ ಮುಖ್ಯ ಗುರಿ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಹೇಳುತ್ತಿದೆ.
ಹೀಗಾಗಿ ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯು ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆ ಮುನ್ನೆಲೆಗೆ ಬರುವಂತೆ ಮಾಡಿದೆ.
ಇದರ ಮಧ್ಯೆ ಲಿಂಗಾಯತ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಹೋರಾಟ ವೇದಿಕೆ ಪದಾಧಿಕಾರಿಗಳು ಏಕತಾ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದು, ದಿಂಗಾಲೇಶ್ವರ ಸ್ವಾಮೀಜಿಗಳು ಸಮಾವೇಶ ಮಾಡುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಾರೆ ಎಂದು ಆರೋಪಿಸಿದರು.



