Chikkodi: ಚಿಕ್ಕೋಡಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಚುನಾವಣೆ ದಿನೇ ದಿನೇ ಶಾಂತಿದಾಯಕ ಪ್ರಕ್ರಿಯೆಯಿಂದ ದೂರ ಸರಿದು ಗಲಾಟೆ ಮತ್ತು ಹಿಂಸಾಚಾರದ ವೇದಿಕೆ ಆಗುತ್ತಿದೆ. ಕಳೆದ ಒಂದು ವಾರದಿಂದ ಚುನಾವಣೆ ಪೂರ್ವ ಸಭೆಗಳು ಜಗಳ, ಬಡಿದಾಟ, ಜೈಕಾರ ಕೂಗಾಟಗಳಿಂದ ಅಶಾಂತ ವಾತಾವರಣಕ್ಕೆ ತಿರುಗಿವೆ.
ಹೆಂಡತಿ ಗಂಡನ ಕೊರಳಪಟ್ಟಿ ಹಿಡಿದು ಹೊಡೆದಾಡಿದ ಘಟನೆ ಜನರ ಗಮನ ಸೆಳೆದಿದೆ. ರಾತ್ರಿ ಪೂರ್ತಿ ಪರ-ವಿರೋಧದ ಜೈಕಾರ ಕೂಗಾಟ, ಸದಸ್ಯರ ಹೈಜಾಕ್ ಘಟನೆಗಳು ಕಾನೂನು ಸುವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿವೆ. ಕಟ್ಟಿಗೆ, ಕಲ್ಲು ಹಿಡಿದು ದಾಳಿ ಮಾಡುವ ಘಟನೆಗಳು ಸಾಮಾನ್ಯವಾಗಿವೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕ್ರೀಯತೆ ತೋರದೆ ‘ಕಣ್ಣಿದ್ದು ಕುರುಡ’ರಾಗಿರುವಂತೆ ವರ್ತಿಸುತ್ತಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. “ಚುನಾವಣೆ ಅಂದ್ರೆ ವಿಚಾರ ಮಂಡನೆ, ಪ್ರಚಾರ ನಡೆಯಬೇಕು. ಆದರೆ ಇಲ್ಲಿ ಗುಂಡಾಗಿರಿ ಬೆದರಿಕೆ, ಹೈಜಾಕ್ ಮಾತ್ರ ಕಾಣಿಸುತ್ತಿದೆ” ಎಂದು ನಾಗರಿಕರು ಕಟುವಾಗಿ ಟೀಕಿಸುತ್ತಿದ್ದಾರೆ.
ಸಚಿವ ಸತೀಶ ಜಾರಕಿಹೊಳಿ ಮತ್ತು ಮಾಜಿ ಸಂಸದ ರಮೇಶ ಕತ್ತಿ ನಡುವಣ ಪ್ರತಿಷ್ಠೆಯ ಕಾಳಗ ತೀವ್ರಗೊಂಡಿದೆ. ಇವರ ಬೆಂಬಲಿಗರ ನಡುವಿನ ಘರ್ಷಣೆಗಳಿಂದ ಗ್ರಾಮಾಂತರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.ಯುವಕರ ಮಧ್ಯೆ ಒಳದ್ವೇಷ ಹುಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜನತೆ ಈಗ ಗೃಹಮಂತ್ರಿಗಳ ತಕ್ಷಣದ ಹಸ್ತಕ್ಷೇಪವನ್ನ ಆಗ್ರಹಿಸಿದ್ದಾರೆ.