ರಾಜ್ಯದಲ್ಲಿ ಮತ್ತೆ ಜಾತಿ ಗಣತಿ ಶುರುವಾಗಲಿದೆ. ದಿಢೀರ್ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಇದೇ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ, 15 ದಿನಗಳ ಕಾಲ ರಾಜ್ಯಾದ್ಯಂತ ಸಮೀಕ್ಷೆ ನಡೆಯಲಿದೆ. ಕಳೆದ ಬಾರಿ ನಡೆದ ಸಮೀಕ್ಷೆಗೆ ಒಕ್ಕಲಿಗರು ಮತ್ತು ಲಿಂಗಾಯತರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ನಂತರ, ಆ ಸಮೀಕ್ಷಾ ವರದಿಯನ್ನು ಸರ್ಕಾರ ಅಂಗೀಕರಿಸಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ, ಇದೀಗ ಮತ್ತೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿದೆ.
ಕಾಂತರಾಜ್ ವರದಿಗೆ 10 ವರ್ಷ ಆಗಿದೆ. ಹೀಗಾಗಿ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿದ್ದು, ಆ ಕಾರ್ಯವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಲಾಗಿದೆ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಸಮಾನತೆ, ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ, ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದೇವೆ. ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯಿದ್ದು, 2 ಕೋಟಿಯಷ್ಟು ಕುಟುಂಬಗಳಿವೆ. ಇವರೆಲ್ಲರಿಗೂ ಸಮಾನ ಅವಕಾಶ ಒದಗಿಸುವುದು ನಮ್ಮ ಕರ್ತವ್ಯ.
ದತ್ತಾಂಶ ಸರಿಯಾಗಿ ಗೊತ್ತಾದರೆ ಮಾತ್ರ, ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ. ಎಚ್ಚರಿಕೆಯಿಂದ, ಪ್ರತಿಯೊಬ್ಬರನ್ನೂ ಒಳಗೊಂಡಂತೆ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಡಿಸೆಂಬರ್ ಒಳಗಾಗಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ದಸರಾ ರಜೆ ಅವಧಿಯಲ್ಲಿ ಸಮೀಕ್ಷಾ ಕಾರ್ಯಕ್ಕೆ, 1.75 ಲಕ್ಷ ಶಿಕ್ಷಕರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಯಾವುದೇ ಲೋಪವಾಗದಂತೆ ಸಮೀಕ್ಷೆ ನಡೆಸಬೇಕಿದೆ. ಶಿಕ್ಷಕರಿಗೆ ವಿಶೇಷ ಭತ್ಯೆ ನೀಡಿ ಸಮೀಕ್ಷೆಗೆ ಬಳಸಿಕೊಳ್ಳುತ್ತಿದ್ದೇವೆ. ಶಿಕ್ಷಕರ ಭತ್ಯೆಯೇ 325 ಕೋಟಿ ರೂ. ಆಗಲಿದೆ. ಸದ್ಯ 425 ಕೋಟಿ ಹಣ ಕೊಡುವುದಾಗಿ ಹೇಳಿದ್ದು, ಹೆಚ್ಚಿನ ಹಣದ ಅಗತ್ಯಬಿದ್ದರೆ ಕೊಡುತ್ತೇವೆ.
ಸಮೀಕ್ಷೆ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆಗೆ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಕಾರ್ಯ ಮಾಡಲಾಗುವುದು. ಸಮೀಕ್ಷಾ ಕಾರ್ಯದಲ್ಲಿ, ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಕೂಡಾ ಸಮೀಕ್ಷೆಯಿಂದ ಹೊರಗುಳಿಯಬಾರದು. 60 ಪ್ರಶ್ನೆಗಳಿಗೆ ಎಲ್ಲರೂ ಸಮರ್ಪಕವಾದ ಮಾಹಿತಿ ಒದಗಿಸಬೇಕೆಂದು, ಸಿಎಂ ಸಿದ್ದರಾಮಯ್ಯ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.