ರಾಹುಲ್ ಗಾಂಧಿ ಏಕೈಕ ನಿರುದ್ಯೋಗಿ – ಪ್ರಹ್ಲಾದ ಜೋಶಿ ಕಿಡಿ!!!

ಧರ್ಮಸ್ಥಳ ಸಂಬಂಧಿತ ವಿವಾದದ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರದ ನೀತಿ ಮತ್ತು ಪೊಲೀಸರ ವರ್ತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ವಿರುದ್ಧ ಮಾತನಾಡಿದವರನ್ನು ಸರ್ಕಾರ ಬಂಧಿಸತ್ತೆ. ಆದರೆ ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ಅಪಮಾನಕರ ಹೇಳಿಕೆ ನೀಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಸಚಿವ ಜೋಶಿ ಮಾತನಾಡಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಪ್ರಸ್ತಾಪಗೊಂಡ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಕಾಂಗ್ರೆಸ್ಸಿಗರ ಪಾತ್ರ ಹೊರಬೀಳಲಿದೆ ಎಂಬ ಆತಂಕ ಸರ್ಕಾರವನ್ನು ಕಾಡುತ್ತಿದೆ. ಹೀಗಾಗಿಯೇ ಅವರನ್ನು ಈವರೆಗೂ ಬಂಧಿಸಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಬುರುಡೆ ತಂದುಕೊಟ್ಟ ವ್ಯಕ್ತಿಯ ಬಗ್ಗೆ ಪ್ರಕರಣದ ಒಳಗೂ ಮುಸುಕುಧಾರಿ ನೀಡಿರುವ ಹೇಳಿಕೆಗಳು ಇವೆ. ಕೊಟ್ಟವನ ಹೊರತಾಗಿ, ತಗೊಂಡವನು ಮಾತ್ರ ಬಂಧಿತನಾಗಿದ್ದಾನೆ ಎಂಬ ವಿಚಾರವನ್ನು ಉಲ್ಲೇಖಿಸಿದರು. ಇದೊಂದು ಯೋಜಿತ ಪ್ರಚೋದನೆ ಅಥವಾ ಘನ ಸ್ಥಳದ ಪ್ರತಿಷ್ಠೆ ಕೆಡಿಸುವ ಅಂತರಾಷ್ಟ್ರೀಯ ಪ್ರಯತ್ನವಾಗಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪ್ರಭಾಕರ ಭಟ್ಟ ಕಲ್ಲಡ್ಕ ಪಾಲ್ಗೊಳ್ಳದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ವೈಯಕ್ತಿಕವಾಗಿ ಮಾತನಾಡುವುದಿಲ್ಲ ಎಂದರು. ಕೋಮು ಗಲಭೆಗೆ ಸಂಬಂಧಿಸಿ ಹಾಗೂ ಸಿಎಂಗೆ ಅವಹೇಳನ ಮಾಡಿದ್ದಾರೆಂದು ಕೆಲವರನ್ನು ಬಂಧಿಸುತ್ತಿರುವ ಪೊಲೀಸರು, ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವವರನ್ನು ಅರೆಸ್ಟ್ ಮಾಡುತ್ತಿಲ್ಲ ಏಕೆ ಎಂದು ಆಕ್ಷೇಪಿಸಿದರು.

ಜೊತೆಗೆ ದೇಶದ ಏಕೈಕ ನಿರುದ್ಯೋಗಿ ರಾಹುಲ್ ಗಾಂಧಿಯವರಿಗೆ ಪ್ರಧಾನಮಂತ್ರಿ ಆಗಬೇಕೆಂಬ ಆಸೆ ಜಾಸ್ತಿ. ಅದಕ್ಕಾಗಿ ಅವರು ಎಲ್ಲೆಲ್ಲಿ ಹೋಗಿದ್ರೂ ನಿರುದ್ಯೋಗದ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಮದ್ದೂರಿನಲ್ಲಿ ಸಂಭವಿಸಿದ ಕಲ್ಲು ತೂರಾಟ ಘಟನೆ ಹಾಗೂ ಅನಧಿಕೃತ ಮಸೀದಿ ನಿರ್ಮಾಣದ ಬಗ್ಗೆ ಕೂಡ ಜೋಶಿಯವರು ಸರ್ಕಾರವನ್ನು ಟೀಕಿಸಿದರು. ಈ ಘಟನೆಯ ಹಿಂದೆ ಹೊರಗಿನ ಸಂಘಟನೆಗಳ ಪಾತ್ರವಿದೆ ಎಂದು ಉಸ್ತುವಾರಿ ಸಚಿವರೇ ಹೇಳಿದ್ದಾರೆ. ಈ ಎಲ್ಲ ಘಟನೆಗಳು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯ ಪುಷ್ಟೀಕರಣವಾಗಿವೆ ಎಂದು ವಿಷಾದಿಸಿದರು.

ವರದಿ : ಲಾವಣ್ಯ ಅನಿಗೋಳ

About The Author