Political News: ಧಾರವಾಡದಲ್ಲಿ ಬೆಳೆ ಹಾನಿ; ಸಚಿವ ಸಂತೋಷ್ ಲಾಡ್ ಬರ ವೀಕ್ಷಣೆ

Dharwad News: ಧಾರವಾಡ ಜಿಲ್ಲೆಯ ಹಲವೆಡೆ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಹಿನ್ನೆಲೆಯಲ್ಲಿ ಸಚಿವ ಸಂತೋಷ್ ಲಾಡ್ ಬರ ವೀಕ್ಷಣೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ ಎಂದರು.

ಧಾರವಾಡ ಜಿಲ್ಲೆಯಲ್ಲಿ ಶೇಕಡಾ 96ರಷ್ಟು ಬೆಳೆ ಹಾನಿಯಾಗಿದೆ ಎಂದು ತಿಳಿಸಿದ ಅವರು, ಸುಮಾರು 42 ಸಾವಿರ ಹೆಕ್ಟೇರ್ ಹೆಸರು, 42 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಸೇರಿದಂತೆ ಸೋಯಾ ಹಾಗೂ ಹತ್ತಿ ಬೆಳೆಗಳು ಹಾನಿಗೊಳಗಾಗಿವೆ ಎಂದರು.

ಮುಖ್ಯಮಂತ್ರಿ ಅವರ ಸೂಚನೆಯಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಲಾಗುತ್ತಿದೆ. ತಾಂತ್ರಿಕ ತಂಡ ಹಾಗೂ ಅಧಿಕಾರಿಗಳೊಂದಿಗೆ ಬೆಳೆ ಹಾನಿ ಸ್ಥಿತಿಗತಿಯನ್ನು ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಸರ್ಕಾರದ ನಿಯಮ ಹಾಗೂ ಮಾನದಂಡಗಳ ಆಧಾರದ ಮೇಲೆ ರೈತರಿಗೆ ಪರಿಹಾರ ತಲುಪಿಸಲಾಗುವುದು. ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಧಾರವಾಡ ಜಿಲ್ಲೆಯ ರೈತರಿಗೆ ಭಾರಿ ಹಾನಿಯಾಗಿದೆ ಎಂದು ಸಚಿವರು ಹೇಳಿದರು.

ಕುಂದಗೋಳದಲ್ಲಿ ಹೆಚ್ಚು ಮಳೆಯಾಗಿದ್ದರೂ ಬೆಳೆ ಕೈಗೆ ಬಂದಿಲ್ಲ. ಹೀಗಾಗಿ ಮಾನದಂಡಗಳ ಆಧಾರದ ಮೇಲೆ ಯಾವ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದರು.

ತಾಂತ್ರಿಕವಾಗಿ ಹಸಿ ಬರ ಎಂದು ಪರಿಗಣಿಸುವ ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದ್ದು, ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಂತೋಷ್ ಲಾಡ್ ತಿಳಿಸಿದರು.

ಈ ವೇಳೆ ರೈತಪರ ಕಾಳಜಿ ಹೊಂದಿರುವ ಶಾಸಕ ಕೋನರಡ್ಡಿ ಅವರು ತಮ್ಮೊಂದಿಗೆ ಇದ್ದಾರೆ. ಅವರ ಸಲಹೆಗಳನ್ನು ಪಡೆದುಕೊಳ್ಳುವುದಾಗಿ ಸಚಿವರು ಹೇಳಿದರು.

ಇನ್ನು ಶಾಸಕ ಕೋನರಡ್ಡಿ ಅವರಿಗೆ ಎಸ್ಕಾರ್ಟ್ ನೀಡಿದ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, “ಯಾವ ಕಾರಣಕ್ಕೆ ಎಸ್ಕಾರ್ಟ್ ನೀಡಲಾಗಿದೆ ಎಂಬುದು ನನಗೆ ಗೊತ್ತಿಲ್ಲ, ಅದು ಅವರಿಗೆ ಗೊತ್ತು” ಎಂದು ಪ್ರತಿಕ್ರಿಯಿಸಿದರು.

About The Author