ರಾಯಚೂರು ಮೂವರು ಯುವತಿಯರ ಆತ್ಮಹತ್ಯೆ ಯತ್ನ ಮಾಡಿದ್ದು, ಅವರ ಲವ್ ಸ್ಟೋರಿಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೆ.ಇರಬಗೇರಾ ಗ್ರಾಮದಲ್ಲಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಪಟ್ಟಂತೆ ಪ್ರೇಮ ಸಂಬಂಧವೇ ಈ ದುರಂತಕ್ಕೆ ಕಾರಣ ಎಂಬ ಆಘಾತಕಾರಿ ಸತ್ಯ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.
ಈ ಆತ್ಮಹತ್ಯೆ ಯತ್ನದಲ್ಲಿ 18 ವರ್ಷದ ರೇಣುಕಾ ಎಂಬ ಯುವತಿ ಮೃತಪಟ್ಟಿದ್ದಾರೆ. 24 ವರ್ಷದ ತಿಮ್ಮಕ್ಕ ಹಾಗೂ 17 ವರ್ಷದ ಅಪ್ರಾಪ್ತ ಯುವತಿ ಇಬ್ಬರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ರೇಣುಕಾ ಹೊಲದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರಂಭದಲ್ಲಿ ಈ ಘಟನೆಗೆ ಕೌಟುಂಬಿಕ ಸಮಸ್ಯೆ ಕಾರಣ ಎಂದು ಶಂಕಿಸಲಾಗಿತ್ತು. ಆದರೆ ಪೊಲೀಸರು ನಡೆಸಿದ ತನಿಖೆಯಲ್ಲಿ ಸತ್ಯ ಬಯಲಾಗಿದೆ. ಈ ಮೂರು ಯುವತಿಯರಿಗೂ ಪ್ರೇಮ ಸಂಬಂಧಗಳು ಇದ್ವು. ಒಬ್ಬ ಯುವತಿಯ ಮದುವೆ ತೀರ್ಮಾನ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ.
ಯುವತಿಯರ ಪ್ರೇಮ ಸಂಬಂಧಗಳು ಗ್ರಾಮದಲ್ಲಿ ಗೊತ್ತಾಗತ್ತೆ ಎಂಬ ಭಯದಿಂದ ತಾವು ಪ್ರೀತಿಸುತ್ತಿದ್ದ ಯುವಕರೊಂದಿಗೆ ಮದುವೆಯಾಗುವುದಿಲ್ಲ ಎಂಬ ಆತಂಕ ಎಲ್ಲರಲ್ಲೂ ಮೂಡಿತ್ತು. ಈ ಹಿನ್ನೆಲೆಯಲ್ಲಿ ಮೂರು ಸ್ನೇಹಿತೆಯರು ಒಟ್ಟಾಗಿ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಮೂವರು ಯುವತಿಯರು ಕಳೆದ ವಾರದಿಂದಲೇ ಆತ್ಮಹತ್ಯೆ ಯತ್ನಕ್ಕೆ ಪೂರ್ವ ಯೋಚನೆ ಮಾಡಿಕೊಂಡಿದ್ದರು ಎಂಬುದೂ ಬೆಳಕಿಗೆ ಬಂದಿದೆ. ಹಳ್ಳಿಯ ಹೊರವಲಯದ ಜಮೀನಿನಲ್ಲಿ ತಿಮ್ಮಕ್ಕ ವಿಷ ಸೇವಿಸಬೇಕಾದ್ರೆ ಅಪ್ರಾಪ್ತ ಯುವತಿ ತಡೆ ಹಿಡಿಯಲು ಯತ್ನಿಸಿದ್ದಳು. ಆದರೆ ತಿಮ್ಮಕ್ಕನೇ ಸತ್ತರೆಂದು ಭಾವಿಸಿದ ರೇಣುಕಾ ಹಾಗೂ ಮತ್ತೊಬ್ಬ ಯುವತಿ ನೇರವಾಗಿ ಬಾವಿಗೆ ಹಾರಿದ ಘಟನೆ ಬಯಲಾಗಿದ್ದು, ಸ್ಥಳೀಯರು ತಕ್ಷಣವೇ ಅವರ ರಕ್ಷಣೆಗೆ ಧಾವಿಸಿದ್ದರು.ಸದ್ಯ ಇಬ್ಬರು ಯುವತಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವರದಿ : ಲಾವಣ್ಯ ಅನಿಗೋಳ