Thursday, November 13, 2025

Latest Posts

HD ಕುಮಾರಸ್ವಾಮಿ ವಿರುದ್ಧ ತನಿಖೆಗೆ ಬ್ರೇಕ್ – ಸುಪ್ರೀಂ ಕೋರ್ಟ್‌ದಿಂದ 2 ವಾರ ತಡೆ!

- Advertisement -

ರಾಮನಗರ ಜಿಲ್ಲೆಯ ಕೇತಗಾನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಭೂಮಿ ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಯುತ್ತಿದೆ. ಆದ್ರೆ ಈಗ ತನಿಖೆಗೆ ಸುಪ್ರೀಂ ಕೋರ್ಟ್‌ ಎರಡು ವಾರಗಳ ತಾತ್ಕಾಲಿಕ ತಡೆ ನೀಡಿದೆ.

ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಹಾಗೂ ಪಿ.ಬಿ. ವರಾಳೆ ಅವರು ಒಳಗೊಂಡಿದ್ದ ಸುಪ್ರೀಂ ಕೋರ್ಟ್‌ ಪೀಠವು ಸೋಮವಾರ ಈ ತಾತ್ಕಾಲಿಕ ತಡೆ ನೀಡಿದೆ. ಈ ತಡೆ, ಕರ್ನಾಟಕ ಹೈಕೋರ್ಟ್‌ ನೀಡಿದ್ದ ತನಿಖೆ ಮುಂದುವರಿಸಲು ಅವಕಾಶ ನೀಡಿದ ಆದೇಶದ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ಮೇಲ್ಮನವಿ ಹಿನ್ನೆಲೆಯಲ್ಲಿ ಹೊರಬಿದ್ದಿದೆ.

ಕೇತಗಾನಹಳ್ಳಿಯ ಸರ್ವೆ ನಂ. 8, 9, 10, 16, 17 ಮತ್ತು 79ರಡಿ ಸುಮಾರು 14 ಎಕರೆ ಸರ್ಕಾರಿ ಭೂಮಿಯನ್ನು ಎಚ್‌.ಡಿ. ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರು ಅಕ್ರಮವಾಗಿ ತಮ್ಮ ಒತ್ತುವರಿಯಲ್ಲಿ ಇಟ್ಟಿದ್ದಾರೆ ಎಂಬ ಆರೋಪಗಳು ಇವೆ. ಈ ಕುರಿತು 2020ರಲ್ಲಿ ಕರ್ನಾಟಕ ಹೈಕೋರ್ಟ್‌ ಲೋಕಾಯುಕ್ತ ವರದಿಯ ಮೇರೆಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಈ ಆದೇಶ ಜಾರಿಗೆ ಬಂದಿಲ್ಲ ಎಂದು ಆಕ್ಷೇಪಿಸಿ ಸಾರ್ವಜನಿಕ ಹಿತಾಸಕ್ತಿ ಸಂಘಟನೆ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಿತ್ತು.

ಭೂ ಒತ್ತುವರಿ ಆರೋಪ ಸಂಬಂಧ ತನಿಖೆ ನಡೆಸಲು IAS ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ SIT ರಚಿಸಲಾಯಿತು. ತಹಶೀಲ್ದಾರ್‌ ಮೂಲಕ ನೋಟಿಸ್‌ ಕೂಡ ಜಾರಿಗೊಂಡಿತು. ಆದರೆ, ಹೈಕೋರ್ಟ್‌ನ ಏಕಸದಸ್ಯ ಪೀಠವು ಈ SIT ರಚನೆ ಹಾಗೂ ನೋಟಿಸ್‌ ಜಾರಿಗೆ ತಡೆ ನೀಡಿತ್ತು.

ಆದರೆ, ಸರ್ಕಾರ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತು. ನಂತರ, ಸೆಪ್ಟೆಂಬರ್ 8ರಂದು ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ತಡೆ ಆದೇಶವನ್ನು ರದ್ದುಗೊಳಿಸಿ, ತನಿಖೆ ಮುಂದುವರಿಸಲು ಸರ್ಕಾರಕ್ಕೆ ಅನುಮತಿ ನೀಡಿತು. ಈ ಆದೇಶದ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಇದೀಗ ಹೈಕೋರ್ಟ್ ಆದೇಶಕ್ಕೆ ಎರಡು ವಾರಗಳ ತಾತ್ಕಾಲಿಕ ತಡೆ ನೀಡಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss