ಜಾತಿಗಣತಿಯ ಹಿನ್ನೆಲೆಯಲ್ಲಿ ರಾಜ್ಯದ ಲಿಂಗಾಯತ ಸಮುದಾಯದ ಯುದ್ಧ ಜೋರಾಗಿದೆ. ವೀರಶೈವ-ಲಿಂಗಾಯತರು ಧರ್ಮದ ಕಾಲಂನಲ್ಲಿ, ಹಿಂದೂ ಎಂದು ಬರೆಸುವಂತೆ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಡಿದ ಮಾತಿಗೆ ಸಚಿವ ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ. ಬಿಜೆಪಿಯನ್ನು ಮೆಚ್ಚಿಸಲು ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಹಿಂದು ಎಂದು ಬರೆಸುವಂತೆ ಕರೆ ನೀಡಿದ್ದಾರೆ. ಆದರೆ, ಅವರ ಮಗಳೇ ಮಹಿಳಾ ಅಧ್ಯಕ್ಷೆಯಾಗಿರುವ ವೀರಶೈವ ಮಹಾಸಭಾದಲ್ಲಿ, ವೀರಶೈವ ಲಿಂಗಾಯತ ಎಂದು ಬರೆಸಲು ಹೇಳಲಾಗುತ್ತಿದೆ ಎನ್ನುತ್ತಿದ್ದಾರೆ.
ದಾವಣಗೆರೆಯ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ, ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ನಿರ್ಣಯ ತೆಗೆದುಕೊಂಡಿದ್ರು. ಆಗ ಯಡಿಯೂರಪ್ಪ, ವಿಜಯೇಂದ್ರ ವೇದಿಕೆಯಲ್ಲೇ ಕುಳಿತಿದ್ದರು. ಆಗ ಅದನ್ನು ವಿರೋಧಿಸದೆ ಸಹಮತ ವ್ಯಕ್ತಪಡಿಸಿದ್ದರು. ಈಗ ಹಿಂದೂ ಎಂದು ಬರೆಸುವಂತೆ ಕರೆ ನೀಡುವ ಮೂಲಕ, ಡಬಲ್ ರೋಲ್ ನಿಭಾಯಿಸುತ್ತಿದ್ದಾರೆ ಎಂದು ಟೀಕಿಸಿದರು.
ಧರ್ಮದ ಕಾಲಂನಲ್ಲಿ ಏನೆಂದು ಉಲ್ಲೇಖಿಸಬೇಕೆಂಬ ಬಗ್ಗೆ, ಬಿಜೆಪಿ, ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ವಿರಕ್ತ ಮಠಗಳಲ್ಲಿ ಬೇರೆ ಬೇರೆ ಅಭಿಪ್ರಾಯವಿದೆ. ಬಿಜೆಪಿಯ ಲಿಂಗಾಯತ ನಾಯಕರು ಹಿಂದು ಎಂದರೆ, ವೀರಶೈವ ಮಹಾಸಭಾ ವೀರಶೈವ ಲಿಂಗಾಯತ ಎಂಬುದಾಗಿ ಹಾಗೂ ವಿರಕ್ತ ಮಠಗಳು ಲಿಂಗಾಯತ ಎಂದು ಬರೆಯಬೇಕೆಂದು ಸಮಾಜದವರಿಗೆ ಹೇಳುತ್ತಿವೆ. ಈ ಎಲ್ಲದರ ಬಗ್ಗೆ ಚರ್ಚೆ ಆಗಬೇಕಿದೆ ಅಂತಾ, ಎಂ.ಬಿ. ಪಾಟೀಲ್ ಹೇಳಿದ್ದಾರೆ




