Kundagola News: ಮಳೆಗಾಗಿ ಕಾದು ಕುಳಿತಿರುವ ರೈತರು ಹಾಗೂ ಗ್ರಾಮಸ್ಥರು ವರುಣನ ಕೃಪೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಘಟನೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯರು ಮತ್ತು ಮಕ್ಕಳು ಸಂಪ್ರದಾಯಬದ್ಧ ಆಚರಣೆಗಳ ಮೂಲಕ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು.
ಮಳೆಯ ಕೊರತೆಯಿಂದ ಕಂಗಾಲಾಗಿರುವ ರೈತರು ವರುಣ ದೇವರ ಕೃಪೆಗಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು.
ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಮಹಿಳೆಯರು ಹಾಗೂ ಮಕ್ಕಳು ಗ್ರಾಮದ ರಸ್ತೆಗಳಲ್ಲಿ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿದ ತುಂಬಿದ ಕೊಡಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಐವರು ಮುತ್ತೈದೆಯರು ಸೇರಿ ತುಂಬಿದ ಕೊಡಕ್ಕೆ ಪೂಜೆ ಸಲ್ಲಿಸಿ, ಮಳೆರಾಯನ ಕೃಪೆ ದೊರೆಯಲೆಂದು ಬೇಡಿಕೊಂಡರು. ಪೂಜೆ ವೇಳೆ ಕೊಡವು ಸ್ವಯಂ ನಾಲ್ಕು ಬಾರಿ ತಿರುಗಿರುವುದು ಗ್ರಾಮಸ್ಥರಲ್ಲಿ ಆಶಾಭಾವನೆ ಮೂಡಿಸಿತು.
ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯದಂತೆ ಈ ಆಚರಣೆ ನಡೆಸಲಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಉತ್ತಮ ಮಳೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಮಹಿಳೆಯರು ಹಾಗೂ ಮಕ್ಕಳು ಸಗಣಿಯಿಂದ ‘ಗುರ್ಜಿ’ ಮೂರ್ತಿಯನ್ನು ತಯಾರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. “ಬಾರೋ ಮಳೆ, ಬಾರೋ ಮಳೆ” ಎಂಬ ಘೋಷಣೆಗಳೊಂದಿಗೆ ಗ್ರಾಮದಲ್ಲಿ ಸಂಚರಿಸಿ, ನಂತರ ಗ್ರಾಮದ ಕೆರೆಯಲ್ಲಿ ಗುರ್ಜಿ ಮೂರ್ತಿಯನ್ನು ವಿಸರ್ಜಿಸಿದರು.
ಈ ವಿಶೇಷ ಪೂಜೆಯಲ್ಲಿ ಗ್ರಾಮದ ಮಹಿಳೆಯರು, ಮಕ್ಕಳು ಹಾಗೂ ರೈತ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




