Hubli News: ಹುಬ್ಬಳ್ಳಿ ಯಲ್ಲಿ ವೀರಶೈವ – ಲಿಂಗಾಯತ ಶಕ್ತಿ ಪ್ರದರ್ಶನವಾಗಿದೆ. ನೆಹರೂ ಮೈದಾನದಲ್ಲಿ ನಡೆದ ವೀರಶೈವ – ಲಿಂಗಾಯತ ಏಕತಾ ಸಮಾವೇಶದಲ್ಲಿ ಪಂಚ ಪೀಠಧೀಶರು ಸೇರಿ ನೂರಾರು ಮಠಾಧೀಶರಿಂದ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಜಾತಿ ಗಣತಿಯಲ್ಲಿ ವೀರಶೈವ – ಲಿಂಗಾಯತ ಧರ್ಮ ನಮೂದಿಸಲು ಕರೆ ಜೊತೆಗೆ ಮಾಜಿ ಸಿಎಂ ಗಳಿಂದ ಹಿಂದೂತ್ವದ ಜಪ ಮಾಡಿದರು. ಮಹಾರಾಷ್ಟ್ರ ಮುಖಂಡ ಮಾಡಿದ ಭಾಷಣ ಮಾಜಿ ಸಿಎಂ ಗಳನ್ನು ಕೆರಳಿಸಿತು.ಜೊತೆಗೆ ಸಮಾವೇಶದಲ್ಲಿ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರದೆ ಇರುವುದು, ವೇದಿಕೆ ಮೇಲೆ ಕೆಲವೊಂದಿಷ್ಟು ಗೊಂದಲ ಸೃಷ್ಟಿಗೆ ಕಾರಣವಾಯಿತು.
ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ ನಡೆಯಿತು. ಸಮಾವೇಶದಲ್ಲಿ ವೀರಶೈವ – ಲಿಂಗಾಯತ ಶಕ್ತಿ ಪ್ರದರ್ಶನ ನಡೆಯಿತು. ಫಕೀರ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ರಂಭಾಪುರಿ ಶ್ರೀ, ಶ್ರೀಶೈಲ ಜಗದ್ಗುರು, ಕಾಶಿ, ಉಜನಿ ಜಗದ್ಗುರುಗಳು, ಸಿದ್ಧಾಂಗಂಗಾ ಶ್ರೀ, ಮೂರು ಸಾವಿರ ಮಠ ಶ್ರೀಗಳು ಸೇರಿ ನೂರಾರು ಮಠಾಧೀಶರು ಪಾಲ್ಗೊಂಡಿದ್ದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಸಚಿವರಾದ ಶರಣಬಸಪ್ಪ ದರ್ಶನಾಪುರ್, ಈಶ್ವರ್ ಖಂಡ್ರೆ, ಶಂಕರ್ ಬಿದರಿ, ವಿಜಯಾನಂದ ಕಾಶಪ್ಪನವರ ಮತ್ತಿತರರು ಉಪಸ್ಥಿತರಿದ್ದರು. ಇಷ್ಟ ಲಿಂಗಕ್ಕೆ ಮಾಲಾರ್ಪಣೆ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ಮಠಾಧೀಶರು ದೀಪ ಬೆಳಗಿ ಶುಭ ಕೋರಿದರು.
ಈ ವೇಳೆ ವಿವಿಧ ಮಠಾಧೀಶರು, ಮುಖಂಡರು ಮಾತನಾಡಿದರು. ಈ ವೇಳೆ ಮಹಾಸಭಾದ ಪರವಾಗಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಧರ್ಮದ ಕಾಲಂ ನಲ್ಲಿ ವೀರಶೈವ – ಲಿಂಗಾಯತ ಎಂದು ನಮೂದಿಸುವಂತೆ ಕರೆ ನೀಡಿದರು. ವೀರಶೈವ – ಲಿಂಗಾಯತ ಸಮಾಜ ಕವಲು ದಾರಿಯಲ್ಲಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಹೊರಗಿಟ್ಟು ಎಲ್ಲರೂ ಒಂದಾಗಬೇಕಿದೆ. ಮಾಠಾಧೀಶರು ತಮ್ಮ ಭಿನ್ನಾಭಿಪ್ರಾಯ ಬಿಡಬೇಕು.
ವೀರಶೈವ – ಲಿಂಗಾಯತ ಬೇರೆ ಬೇರೆ ಅಲ್ಲ, ಎರಡೂ ಒಂದೇ ಧರ್ಮ. ಒಗ್ಗಟ್ಟಾಗೋ ಕಾಲದಲ್ಲಿ ಒಡಕಿನ ಮಾತು ಸರಿಯಲ್ಲ. ವೀರಶೈವ – ಲಿಂಗಾಯತ ಪ್ರತ್ಯೇಕ ಧರ್ಮ ಪಡೆಯೋ ಕಾಲ ಸನ್ನಿಹಿತವಾಗಿದೆ. ಇದನ್ನು ಕಾರ್ಯಗತ ಮಾಡಲು ವೀರಶೈವ ಲಿಂಗಾಯತ ಮಹಾಸಭಾ ಯತ್ನಿಸುತ್ತದೆ ಎಂದರು.
ಇದೆ ವೇಳೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಲಿಂಗಾಯತ ಹಿಂದೂ ಧರ್ಮದ ಭಾಗವಾಗಿದೆ. ವೀರಶೈವ – ಲಿಂಗಾಯತ ಎರಡೂ ಒಂದೇ. ವೀರಶೈವ – ಲಿಂಗಾಯತ ಕ್ಕೆ ಇನ್ನೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿಲ್ಲ. ಲಿಂಗಾಯತ ಹಿಂದೂ ಧರ್ಮದಲ್ಲಿ ಸೇರಿರುತ್ತದೆ. ಹೀಗಾಗಿ ಧರ್ಮದಲ್ಲಿ ಹಿಂದೂ ಎಂದು ನಮೂದಿಸುವಂತೆ ಶೆಟ್ಟರ್ ತಿಳಿಸಿದರು.
ಇದೇ ವೇಳೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ನಮ್ಮ ಸಹನಾ ಗುಣವೇ ದೌರ್ಬಲ್ಯವಾಗ್ತಿದೆ. ನಮ್ಮಲ್ಲಿ ಒಗ್ಗಟ್ಟಿಲ್ಲ. ಒಗ್ಗಟ್ಟಿದ್ದಲ್ಲಿ ಯಾರೂ ನಮ್ಮನ್ನು ಮುಟ್ಟೋ ಸಾಹಸ ಮಾಡಲ್ಲ. ವೀರಶೈವ – ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹತ್ತಾರು ವರ್ಷಗಳ ಹೋರಾಟವಿದೆ. ಸದ್ಯ ದೇಶದಲ್ಲಿ ಆರೇ ಧರ್ಮಗಳಿವೆ. ನಮ್ಮ ಪ್ರಯತ್ನಕ್ಕೆ ಮುಂದೆ ಜಯ ಸಿಕ್ಕೇ ಸಿಗುತ್ತೆ. ಯಾವುದೇ ಧರ್ಮಕ್ಕೆ ಸೇರಿದ್ದರೂ ಲೆಕ್ಕಕ್ಕಿಲ್ಲ. ಸಂವಿಧಾನದಲ್ಲಿರೋ ಧರ್ಮವನ್ನಷ್ಟೇ ನಮೂದಿಸಬೇಕೆಂದು ಬೊಮ್ಮಾಯಿ ಕರೆ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಿಂಗಾಲೇಶ್ವರ ಶ್ರೀ, ಗೊಂದಲ ಮೂಡಿಸದಿರುವಂತೆ ಕಿವಿಮಾತು ಹೇಳಿದರು. ಇದು ವೀರಶೈವ – ಲಿಂಗಾಯತ ಏಕತಾ ಸಮಾವೇಶ ಇದಕ್ಕೆ ಬದ್ಧರಾಗಿಯೇ ಮಾತನಾಡಬೇಕು. ಅದನ್ನು ಬಿಟ್ಟು ಬರೆದುಕೊಂಡು ಬಂದ್ದನ್ನು ಓದಿ ಗೊಂದಲ ಮೂಡಿಸದಿರುವಂತೆ ಸಲಹೆ ನೀಡಿದರು. ಇನ್ನೂ ಇದೇ ವೇಳೆ ಮಾತನಾಡಿದ ರಂಭಾಪುರಿ ಶ್ರೀಗಳು ವೀರಶೈವ ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರ ಮನ್ನಣೆ ನೀಡಿಲ್ಲ. ಹೀಗಾಗಿ ಧರ್ಮ ಕಾಲಂ ನಲ್ಲಿ ಹಿಂದೂ ಎಂದು ,ಜಾತಿ ಕಲಂ ನಲ್ಲಿ ವೀರಶೈವ ಲಿಂಗಾಯತ ಬರೆಸಬೇಕೆಂದು ಕರೆ ನೀಡಿದರು
ಇದೆ ವೇಳೆ ಮಹಾರಾಷ್ಟ್ರ ಮುಖಂಡ, ರಾಜ್ಯ ಸಭಾ ಸದಸ್ಯ ಮನೋಹರ್ ದೊಂಡೆ ಭಾಷಣಕ್ಕೆ ಆಕ್ಷೇಪ ವ್ಯಾಕ್ತವಾಯಿತು. ಮಾಜಿ ಸಿಎಂ ಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ವೇದಿಕೆ ಮೇಲೆ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸುವುದು ಬೇಡ ವೀರಶೈವ ಲಿಂಗಾಯತ ಎಂದು ಬೆರೆಸುವಂತೆ ಕರೆ ನೀಡಿದರು.
ಭಾಷಣದಲ್ಲಿ ಅಮಿತ್ ಷಾ ಹೆಸರು ಪ್ರಸ್ತಾಪಿಸಿದರು. ಹಿಂದುತ್ವ ಪ್ರತಿಪಾದಿಸುವ ಅಮಿತ್ ಶಾ ಅವರ ಧರ್ಮವೂ ಕೂಡ ಬೇರೆ ಎಂದು ಉಲ್ಲೇಖ ಮಾಡಿದ್ದಕ್ಕೆ ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾತನಾಡುವಾಗ ನಮಗೆ ಶಿಷ್ಟಚಾರ ಹೇಳಿದ್ರೀ. ಈಗ ಶಿಷ್ಟಚಾರ ಉಲ್ಲಂಘನೆ ಆಗಿದೆ. ನಾವು ಮಾತನಾಡಲು ಆರಂಭಿಸಿದ್ರೆ ಇದಕ್ಕಿಂತ ಹೆಚ್ಚು ಮಾತನಾಡುತ್ತೇವೆ ಎಂದರು.
ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಇಬ್ಬರು ವೇದಿಕೆ ಮೇಲೆದ್ದು ಆಕ್ರೋಶ ವ್ಯಾಕ್ತಪಡಿಸಿ, ವೇದಿಕೆಯಿಂದ ಎದ್ದು ಹೊರಡಲು ಮುಂದಾದರು. ಉಭಯ ನಾಯಕರನ್ನು ಈಶ್ವರ್ ಖಂಡ್ರೆ ಸಮಾಧಾನಪಡಿಸಿದರು.
ಆದರೆ ಸಮಾವೇಶ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಾರದೆ, ಗೊಂದಲದಲ್ಲೆ ಕಾರ್ಯಕ್ರಮ ಮುಗಿತು. ಇದಕ್ಕೂ ಮುನ್ನ ಮೂರು ಸಾವಿರ ಮಠದಿಂದ ನೆಹರೂ ಮೈದಾನದವರೆಗೆ ಮೆರವಣಿಗೆ ನಡೆಯಿತು. ವಿವಿಧ ಮಠಾಧೀಷರು, ಸಾವಿರರು ಜನ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರು. ದೇಶದ ವಿವಿದೆಡೆಯ ಮಠಾಧೀಶರು ಪಾಲ್ಗೊಂಡಿದ್ದರಿಂದ, ನೆಹರೂ ಮೈದಾನ ಕಾವಿಮಯವಾಗಿತ್ತು.
-ಕ್ಯಾಮರಾ ಜರ್ನಲಿಸ್ಟ್ ಹೇಮಂತ್ ಜೊತೆ ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ



