ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಿದ್ದ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕರ್ನಾಟಕ ಪ್ರದೇಶ ಕುರುಬರ ಎಸ್.ಟಿ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ, ಸಿದ್ದಣ್ಣ ತೇಜಿ ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ. ಸೆಕ್ಷನ್ 352 (2) ಎರಡೂ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಹೇಳಿಕೆ ಅಡಿ, ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಶ್ರೀವತ್ಸ ವಿರುದ್ಧ
ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಗಿತ್ತು. ಸಿದ್ದಣ್ಣ ತೇಜಿ ದೂರನ್ನು, ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಸೆಪ್ಟೆಂಬರ್ 15, 16ರಂದು ಕಾರ್ಯಕ್ರಮವೊಂದ್ರಲ್ಲಿ, ಇಬ್ಬರು ನಾಯಕರು ಮಾತನಾಡಿದ್ದಾರೆ. ಮುಖ್ಯಮಂತ್ರಿಗಳನ್ನು ವಿರೋಧಿಸುವ ಭರದಲ್ಲಿ, ಇಡೀ ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಪರಿಶಿಷ್ಟ ಪಂಗಡದವರು, ವಾಲ್ಮೀಕಿ ಸಮಾಜದವರು, ಕುರುಬ ಸಮಾಜದ ಮೇಲೆ ದಂಗೆ ಏಳಬೇಕು ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಪ್ರಚೋದಿಸುವ ಮೂಲಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.