Political News: ಸದ್ಯ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ ಅದು, ಜಾತಿ ಗಣತಿ ಸಮೀಕ್ಷೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಈ ಮಧ್ಯ ಕೇಂದ್ರ ಸಚಿವ ಹೆಚ್.ಡಿ.,ಕುಮಾರಸ್ವಾಮಿಯವರ ಕೂಡ ಈ ಬಗ್ಗೆ ಮಾತನಾಡಿದ್ದಾರೆ.
ಶೈಕ್ಷಣಿಕ-ಸಾಮಾಜಿಕ ಸಮೀಕ್ಷೆ ಬಗ್ಗೆ ನಮಗೇನೂ ತಕರಾರಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಕಾಲ ಕಾಲಕ್ಕೆ ಸಮೀಕ್ಷೆ ನಡೆಯಬೇಕು, ನಡೆಯಲಿ. ನಾನು ಬೇಡವೆನ್ನುವುದಿಲ್ಲ.ಆದರೆ, ಕೇವಲ ಹದಿನೈದೇ ದಿನದಲ್ಲಿ 6.5 ಕೋಟಿ ಜನರ ಸಮೀಕ್ಷೆ ಸಾಧ್ಯವೇ? ಈಗ ಪವಿತ್ರ ನಾಡಹಬ್ಬ, ನವರಾತ್ರಿಗಳ ಸಂದರ್ಭ. ಸಮೀಕ್ಷೆ ನಡೆಸುವ ಅಂಗವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಸರಕಾರಿ ಅಧಿಕಾರಿ -ಸಿಬ್ಬಂದಿಗೆ ಹಬ್ಬ, ಆಚರಣೆ, ಸಂಭ್ರಮ ಇರುವುದಿಲ್ಲವೇ? ನಿಮಗೆ ಮಾತ್ರವೇ ನವರಾತ್ರಿಯೇ? ಎಂದು ಪ್ರಶ್ನಿಸುವ ಮೂಲಕ, ಶಿಕ್ಷಕ ವೃಂದದ ಪರ ನಿಂತಿದ್ದಾರೆ.
ನವದುರ್ಗೆಯರನ್ನು ಪೂಜಿಸುವ ಈ ಕಾಲದಲ್ಲಿ ಮಹಿಳೆಯರಿಗೆ ತಮ್ಮ ಮನೆಗಳಲ್ಲಿ ನೆರವೇರಿಸಲೇಬೇಕಾದ ಧಾರ್ಮಿಕ ಕಾರ್ಯಗಳು ಇರುತ್ತವೆ. ಈ ಸಮಯದಲ್ಲಿ ಸಮೀಕ್ಷೆ ಹೇಗೆ ಸಾಧ್ಯ?
ಹೀಗಾಗಿ ಇದು ಸಮೀಕ್ಷೆಗೆ ಸಕಾಲವಲ್ಲ. ಮುಂದಕ್ಕೆ ಹಾಕಿ ಅಥವಾ ಸಮಯ ವಿಸ್ತರಿಸಿ. ಜನರಿಗೆ ಪ್ರಾಮಾಣಿಕ, ವಸ್ತುನಿಷ್ಠ, ಸತ್ಯನಿಷ್ಠ ಸಮೀಕ್ಷೆ ಬೇಕು. ಇಲ್ಲವಾದರೆ ಇದಕ್ಕೂ ಹಿಂದಿನ ಎರಡು ಸಮೀಕ್ಷಾ ವರದಿಗಳ ಗತಿಯೇ ಆಗಲಿದೆ. ಜನರ ತೆರಿಗೆ ಹಣ ಪೋಲಾಗಬೇಕೆ? ಇನ್ನೂ ಎಷ್ಟು ಕೋಟಿ ಖರ್ಚಾಗಬೇಕು? ಕೊನೇಪಕ್ಷ 3 ತಿಂಗಳ ಕಾಲಾವಕಾಶ ಬೇಕೇಬೇಕು. ಹಂತ ಹಂತವಾಗಿ ಸಮೀಕ್ಷೆ ನಡೆಸಿ. ಅದಕ್ಕೇನು ಸಮಸ್ಯೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಆತುರಾತುರ ಸಮೀಕ್ಷೆ ಯಾರ ಆನಂದಕ್ಕೆ? ಎಲ್ಲರನ್ನೂ ಒಳಗೊಳ್ಳುವ, ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ಆದರ್ಶ ಸಮೀಕ್ಷೆ ಅಗತ್ಯ. ತಪ್ಪಿದರೆ ಈ ಸಮೀಕ್ಷೆಯ ಹಿಂದಿರುವ ಶಕ್ತಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ..

