ಧರ್ಮಸ್ಥಳ ಪ್ರಕರಣ ದಿನೇದಿನೇ ಹೊಸ ತಿರುವು ಪಡೆಯುತ್ತಿದೆ. ಚಿನ್ನಯ್ಯ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿರುವ ಹಳೆಯ ವಿಡಿಯೋಗಳು ವೈರಲ್ ಆಗಿರುವ ನಡುವೆ, ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿರುವ ಪ್ರಕರಣದ ತನಿಖೆ ಗಂಭೀರ ಹಂತ ತಲುಪಿದೆ. ವಿಶೇಷ ತನಿಖಾ ದಳ ಬಂಗ್ಲೆಗುಡ್ಡ ಅರಣ್ಯದಲ್ಲಿ ನಡೆಸಿದ ಮಹಜರಿನಲ್ಲಿ ಏಳು ತಲೆಬುರುಡೆಗಳು ಮತ್ತು ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಇದನ್ನು ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಎಸ್ಐಟಿ ಸಿದ್ದತೆ ನಡೆಸಿದೆ.
ಈ ಪೈಕಿ ಒಂದಿಷ್ಟು ಮಾಹಿತಿಗಳು ಈಗಾಗಲೇ ಸ್ಪಷ್ಟವಾಗಿವೆ. ಪತ್ತೆಯಾದ ಒಂದು ಅಸ್ಥಿಪಂಜರ ಕೊಡಗು ಮೂಲದ ಯು.ಬಿ. ಅಯ್ಯಪ್ಪ ಅವರದ್ದೇ ಎಂದು ಖಚಿತವಾಗಿದೆ. ಸ್ಥಳದಲ್ಲೇ ದೊರೆತ ಗುರುತಿನ ಚೀಟಿ ಮತ್ತು ವಾಕಿಂಗ್ ಸ್ಟಿಕ್ ಇದನ್ನು ದೃಢಪಡಿಸಿದೆ. ಅಯ್ಯಪ್ಪ ಅವರ ಪುತ್ರ ಜೀವನ್, ಶನಿವಾರ ಬೆಳ್ತಂಗಡಿ ಎಸ್ಐಟಿ ಠಾಣೆಗೆ ಹಾಜರಾಗಿ ತಂದೆಯ ನಾಪತ್ತೆ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ. ಉಳಿದ ಅಸ್ಥಿಪಂಜರಗಳ ಗುರುತು ಪತ್ತೆ ಮಾಡಲು ಎಸ್ಐಟಿ ಡಿಎನ್ಎ ಪರೀಕ್ಷೆಗೆ ಕಳುಹಿಸಲು ತೀರ್ಮಾನಿಸಿದೆ.
ಇದೇ ವೇಳೆ ಮೂಲ ದೂರುದಾರ ಚಿನ್ನಯ್ಯ ಸಾಕಷ್ಟು ಸುಳ್ಳು ಹೇಳಿಕೆಗಳನ್ನು ನೀಡಿರುವುದು ಎಸ್ಐಟಿಗೆ ಸ್ಪಷ್ಟವಾಗಿದೆ. ಇದರ ಹಿಂದೆ ಯಾವ ಷಡ್ಯಂತ್ರವಿದೆ ಎಂಬುದನ್ನು ಪತ್ತೆ ಮಾಡಲು ತನಿಖೆ ಮುಂದುವರೆದಿದೆ. ಹೈಕೋರ್ಟ್ನಲ್ಲಿ ವಿಚಾರಣೆ ವೇಳೆ, ಧರ್ಮಸ್ಥಳ ಗ್ರಾಮದ ಪಂಗಳ ಮನೆಯ ಪುರಂದರ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಚಿನ್ನಯ್ಯ ಈಗ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ, ಆತನ ಹೇಳಿಕೆಯ ಹೊರತಾಗಿ ಯಾವುದೇ ಹೆಚ್ಚುವರಿ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲು ಸೂಚನೆ ನೀಡಿದೆ. ಬಳಿಕ ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ