Tuesday, September 23, 2025

Latest Posts

Political News: ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ: ಎನ್. ಚಲುವರಾಯಸ್ವಾಮಿ

- Advertisement -

Political News: ಗ್ರಾಮ, ಜಿಲ್ಲೆ ಮತ್ತು ರಾಜ್ಯವನ್ನು ಸ್ವಚ್ಛವಾಗಿರಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದ್ದು, ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯ ಸ್ವಾಮಿ ಅವರು ಅಭಿಪ್ರಾಯಪಟ್ಟರು.

ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ಜಿಲ್ಲೆಯಲ್ಲಿ ಸ್ವಚ್ಛತೆಯ ಸೇವೆಯನ್ನು ಕೈಗೊಂಡಿದ್ದು ಅನೇಕರು ಸ್ವಚ್ಛತೆಯ ಸೇವೆಯಲ್ಲಿ ಪಾಲ್ಗೊಂಡು ಜಿಲ್ಲೆಯ ಸ್ವಚ್ಛತೆಗೆ ಪಾತ್ರವಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮ, ರಾಜ್ಯ, ದೇಶ ಸ್ವಚ್ಛವಾಗಿರಬೇಕೆಂದರೆ ಸಾರ್ವಜನಿಕರ ಪಾತ್ರ ಬಹಳ ಮುಖ್ಯ. ಕೇವಲ ಸರ್ಕಾರದಿಂದ ರಾಜ್ಯವನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲ, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸುವುದರಿಂದ ಸ್ವಚ್ಛತೆ ಸಾಧ್ಯವಾಗುತ್ತದೆ. ಆಗಾಗಿ ಪ್ರತಿಯೊಬ್ಬರೂ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಿ ಎಂದು ತಿಳಿಸಿದರು.

ವ್ಯವಸಾಯದಿಂದ ಹೆಚ್ಚಿನ ಲಾಭಗಳಿಸಬಹುದು ಎನ್ನುವುದಕ್ಕೆ ಒಂದು ಎಕರೆ ಭೂಮಿಯಿಂದ ಒಂದು ಲಕ್ಷ ಸಂಪಾದನೆ ಮಾಡಿರುವುದು ಉದಾಹರಣೆಯಿದೆ. ಇಲಾಖೆಗಳ ಸಲಹೆ ಹಾಗೂ ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಿ ಎಂದರು.

ಕೃಷಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಅನೇಕ ಕಾರ್ಯಕ್ರಮ ಹಾಗೂ ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿದ್ದು, ವಿಜ್ಞಾನಿಗಳ ಸಲಹೆಗಳ ಮೇರೆಗೆ ವ್ಯವಸಾಯವನ್ನು ಅಭಿವೃದ್ಧಿ ಪಡಿಸಿ, ಕೃಷಿಯಲ್ಲಿ ಯಶಸ್ವಿಗೊಂಡು ವ್ಯವಹಾರ ಕ್ಷೇತ್ರಗಳಲ್ಲಿ ಲಾಭಗಳಿಸಿ ಎಂದು ಹೇಳಿದರು.

ಜಿಲ್ಲೆಯಲ್ಲಿನ ನಾಗರೀಕರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗಳನ್ನು ತಿಳಿದು ಅವರ ಪರವಾಗಿ ಯೋಜನೆಗಳನ್ನ ರೂಪಿಸಲು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಂಡಿದ್ದು, ಇಂದು ಸಮೀಕ್ಷೆಗೆ ಚಾಲನೆ ನೀಡಲಾಗಿದೆ. ಸಮೀಕ್ಷೆ ಯಶಸ್ವಿಗೊಳ್ಳಲು ಸಹಕರಿಸಿ ಎಂದರು.

ಸಮೀಕ್ಷೆಗೆ ನೀಡಿರುವ ಸಮಯ ಕಡಿಮೆಯಿದೆ ಎಂಬುವುದು ಇತರರ ಕಲ್ಪನೆಯಾಗಿದ್ದು, ವಿಧಿಸಿರುವ ಅವಧಿಯಲ್ಲಿ ಸಮೀಕ್ಷೆ ಪೂರ್ಣವಾಗದೆ ಇದ್ದಲ್ಲಿ ಸಮೀಕ್ಷೆಯ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯಿರುತ್ತದೆ ಯಾರಲ್ಲಿಯೂ ತಪ್ಪು ಕಲ್ಪನೆ ಬೇಡ ಎಂದು ತಿಳಿಸಿದರು.

ಜಾತಿ ಗಣತಿಗಾಗಿ ಸಮೀಕ್ಷೆ ನಡೆಯುತ್ತಿಲ್ಲ ಜನರ ಸಮಸ್ಯೆ ಪರಿಹರಿಸಲು ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಸಮೀಕ್ಷೆ ನಡೆಸಲು ಶಾಲಾ ಶಿಕ್ಷಕರ ಅವಶ್ಯಕತೆಯಿರುವುದರಿಂದ ರಜದ ಸಮಯದಲ್ಲಿ ಸಮೀಕ್ಷೆಯ ಕಾರ್ಯವನ್ನು ಕೈಗೊಳ್ಳಲಾಗಿದೆ. ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಹಮ್ಮಿಕೊಳ್ಳಲಾಗಿರುಚ ಸ್ವಚ್ಛತಾ ಹೀ ಸೇವಾ ಹಾಗೂ ಅಕ್ಟೋಬರ್‌ 1 ರಿಂದ 30 ರವರೆಗೆ ಹಮ್ಮಿಕೊಳ್ಳಲಾಗಿರುವ ಮಾದಕ ಮುಕ್ತ ಕರ್ನಾಟಕ ಅಭಿಯಾನ ಪರಿವರ್ತನೆ ಕುರಿತು ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಿ ಸ್ವಚ್ಛತೆ ಕುರಿತು ಪ್ರಮಾಣ ವಚನ ಭೋದಿಸಿದರು.

ಇದೇ ಸಂಧರ್ಭದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest Posts

Don't Miss