Tumakuru: ತುಮಕೂರು: ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಜಾತಿ ತಾರತಮ್ಯ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ದಲಿತ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ಚೇರ್ ಟೇಬಲ್ ನೀೠದೇ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಚೇರ್ ಸಿಗದೇ, ಮೇಲಧಿಕಾರಿಯ ಕಿರುಕುಳಕ್ಕೆ ಬೇಸತ್ತು ನೆಲದ ಮೇಲೆ ಚೀಲ ಹಾಸಿ ಕುಳಿತು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಹಣಕಾಸು ವಿಭಾಗದ ಆಡಳಿತಾಧೀಕ್ಷಕ ವಿನಯ್ ಎಂಬ ಅಧಿಕಾರಿಗೆ ಈ ಕಿರುಕುಳ ಆಗಿದ್ದು, ಡೈರಿ ಮೇಲ್ವಿಚಾರಕ ಉಮೇಶ್ ಮತ್ತು ಆಡಳಿತ ವಿಭಾಗದ ವ್ಯವಸ್ಥಾಪಕ ಮಂಜುನಾಥ್ ನಾಯಕ ಎಂಬುವರಿಂದ ಕಿರುಕುಳ ಆಗಿದೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಮೂರು ದಿನಗಳಿಂದ ವಿನಯ್ ನೆಲದ ಮೇಲೆ ಚೀಲ ಹಾಸಿ, ಕೆಲಸ ಮಾಡುತ್ತಿದ್ದು, ದಲಿತ ಎಂಬ ಕಾರಣಕ್ಕೆ ತನಗೆ ಚೇರ್ ನೀಡದೇ ಅವಮಾನಿಸಿದ್ದಾರೆಂದು ವಿನಯ್ ಆರೋಪಿಸಿದ್ದಾರೆ. 1 ತಿಂಗಳ ಹಿಂದೆ ಕೆಲಸಕ್ಕೆ ಬಂದಾಗ, ಮೂಲೆಯಲ್ಲಿ ಸಣ್ಣ ಚೇಂಬರ್ ನೀಡಿ, ಕೆಲಸ ಮಾಡಲು ಅವಕಾಶ ನೀಡಿದ್ದರು. ಆದರೆ ಮಂಜುನಾಥ್ ನಾಯಕ್, ವಿನಯ್ ಗೆ ಚೇಂಬರ್ ನೀಡದೆ, ಯಾವುದಾದರೂ ಕೆಲಸಕ್ಕೆ ನಿಯೋಜಿಸುವಂತೆ ಸೂಚಿಸಿದ್ದರು.
ಹೀಗಾಗಿ ವಿನಯ್‌ಗೆ ನೀಡಿದ್ದ ಚೇಂಬರ್‌ನ್ನು ವಾಪಸ್ ಪಡೆದು, ನೆಲಕ್ಕೆ ಕೂರುವಂತೆ ಮಾಡಲಾಗಿದೆ ಎಂದು ಆರೋಪಿಸಿರುವ ವಿನಯ್, ಚೇಂಬರ್‌ಗಾಗಿ ಏಕಾಂಗಿ ಹೋರಾಟ ನಡೆಸಿದ್ದಾರೆ.