ಕೋಲಾರ ಜಿಲ್ಲೆಯಲ್ಲೂ ಜಾತಿಗಣತಿಗೆ ಚಾಲನೆ ನೀಡಲಾಗಿದೆ. ಪ್ರಮುಖ ನಾಯಕರ ಮನೆಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ, ಚಾಲನೆ ನೀಡಲಾಗಿದೆ. ಆದ್ರೆ ತಾಂತ್ರಿಕ ಸಮಸ್ಯೆ ಹಿನ್ನೆಲೆ, ಕೆಲ ಹೊತ್ತು ತೊಡಕುಂಟಾಗಿ ಆತಂಕ ಮೂಡಿಸಿತ್ತು. ಕೈಪಿಡಿ, ಬ್ಯಾಗ್ ಒಳಗೊಂಡ ಕಿಟ್‌ಗಳೊಂದಿಗೆ, 15 ತಾಲೂಕುಗಳಲ್ಲಿ ಮನೆ ಮನೆಗೆ ತೆರಳಿ ಗಣತಿದಾರರು ಸಮೀಕ್ಷೆ ಕೈಗೊಂಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ 4 ಲಕ್ಷದ 17 ಸಾವಿರದ 305 ಕುಟುಂಬಗಳಿವೆ. ಪ್ರತಿ 150 ಮನೆಗಳಿಗೆ ಒಬ್ಬ ಗಣತಿದಾರರಾಗಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಲಾಗಿದೆ. ಪ್ರತಿ 15ರಿಂದ 20 ಗಣತಿದಾರರಿಗೆ ಒಬ್ಬರಂತೆ, ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು, ಬಿಆರ್‌ಸಿ-ಸಿಆರ್‌ಸಿಗಳು ಮೇಲ್ವಿಚಾರಕರಾಗಿ ನಿಗಾವಹಿಸಿದ್ದಾರೆ. ಪ್ರತಿ 50 ಗಣತಿದಾರರಿಗೆ ಒಬ್ಬ ಮಾಸ್ಟರ್ ಟ್ರೈನರ್ ನಿಯೋಜನೆ ಮಾಡಲಾಗಿದೆ.
ಬೆಸ್ಕಾಂ ಸಿಬ್ಬಂದಿ 2 ವಾರಗಳಿಂದ, ಪ್ರತಿಯೊಂದು ಮನೆಗಳ ವಿದ್ಯುತ್ ಮೀಟರ್‌ಗೆ ಸ್ಟಿಕ್ಕರ್ ಅಂಟಿಸಿ, ಯೂನಿಕ್ ಹೌಸಿಂಗ್ ಐಡೆಂಟಿಫಿಕೇಷನ್ ನಿಗದಿ ಪಡಿಸಿದ್ದಾರೆ. ಇದ್ರಿಂದ ಜಾತಿ ಗಣತಿ ಸುಲಭವಾಗಿದೆ. ಜಾತಿಗಣತಿ ಬಗ್ಗೆ ಮಾತನಾಡಿರುವ ಎಂಎಲ್‌ಸಿ ಅನಿಲ್ ಕುಮಾರ್, ಪ್ರತಿಯೊಬ್ಬರು ಸಮೀಕ್ಷೆಯಲ್ಲಿ ಭಾಗಿಯಾಗಿ. ಕಾಟಾಚಾರಕ್ಕೆ ಸುಳ್ಳು ಮಾಹಿತಿ ನೀಡಬೇಡಿ. ನಿಖರ-ಸಮಗ್ರ ಮಾಹಿತಿ ನೀಡುವಂತೆ ಕರೆ ಕೊಟ್ಟಿದ್ದಾರೆ.

