ಈ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರ್ತಾರೆ, ಆದರೆ ಕೆಟ್ಟ ತಾಯಿ ಇರಲ್ಲ ಅನ್ನೋದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ಹೌದು, ಗರ್ಭಿಣಿ ಮಹಿಳೆಯೊಬ್ಬಳು ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದಾಳೆ. ಆ ವೇಳೆ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಲಭ್ಯವಿರದ ಕಾರಣ ಆಸ್ಪತ್ರೆಯ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿ, ಆ ಮಗುವನ್ನ ಸ್ನಾನಗೃಹದ ಬಕೆಟ್ನಲ್ಲಿ ಬಿಟ್ಟು ಹೋಗಿದ್ದಾಳೆ.
ಈ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಗಿಡ್ಡಲೂರಿನಲ್ಲಿ ನಡೆದಿದೆ. ಮಗು ಅಳುತ್ತಿರುವುದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿಗಳು ಮಗುವನ್ನು ರಕ್ಷಿಸಿ, ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದರು.ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಆಗಮಿಸಿ ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಈ ವೇಳೆ ಹೆರಿಗೆಗಾಗಿ ಆಸ್ಪತ್ರೆಗೆ ಬಂದ ಮಹಿಳೆಯ ಜೊತೆಗೆ ವ್ಯಕ್ತಿಯೊಬ್ಬನು ಬಂದಿರುವುದು ತಿಳಿದು ಬಂದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳ ಮೂಲಕ ಪೊಲೀಸರು ಮಹಿಳೆಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.
ಪೊಲೀಸರಿಗೆ ತನಿಖೆಯ ವೇಳೆ ಗರ್ಭಿಣಿ ಮಹಿಳೆ ಹೆರಿಗೆಗೆ ಬಂದಾಗ ಯಾವುದೇ ವೈದ್ಯರು ಲಭ್ಯವಿರಲಿಲ್ಲ. ಹೀಗಾಗಿ ಈ ಗರ್ಭಿಣಿ ಮಹಿಳೆ ಶೌಚಾಲಯಕ್ಕೆ ಹೋಗಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಮಗು ಆರೋಗ್ಯವಾಗಿದೆ ಮತ್ತು ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಆರೈಕೆಗಾಗಿ ಮಗುವನ್ನು ಐಸಿಡಿಎಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಸಿಐ ಸುರೇಶ್ ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




