ಸರ್ವರ್ ಸಮಸ್ಯೆ, ಗೊಂದಲ, ವಿರೋಧಗಳ ನಡುವೆಯೇ, ರಾಜ್ಯದಲ್ಲಿ ಜಾತಿಗಣತಿ ನಡೆಯುತ್ತಿದೆ. ಎಲ್ಲೇ ಹೋದ್ರೂ ಸರ್ವರ್ ಪ್ರಾಬ್ಲಂ, OTP ಬರ್ತಿಲ್ಲ, ತಾಂತ್ರಿಕ ಸಮಸ್ಯೆ. ಮೊಬೈಲ್ ನೆಟ್‌ವರ್ಕ್‌ಗಾಗಿ ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರು, ಮರ, ನೀರಿನ ಟ್ಯಾಂಕ್ ಹತ್ತುವ ಪರಿಸ್ಥಿತಿ ಬಂದಿದೆ.
ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ, ಗಣತಿದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೀದರ್ ಜಿಲ್ಲೆಯ ಮಹಾರಾಷ್ಟ್ರದ ಗಡಿಯ ಔರಾದ್, ಕಮಲನಗರ, ಬಸವ ಕಲ್ಯಾಣ, ಹುಲಸೂರು ತಾಲೂಕಿನ ಕೆಲವು ಗ್ರಾಮ ಹಾಗೂ ತಾಂಡಾಗಳಲ್ಲಿ, ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ. ನೆಟ್‌ವರ್ಕ್‌ಗಾಗಿ ಶಿಕ್ಷಕರು ಭಾರೀ ಸಾಹಸ ಮಾಡಬೇಕಾಗಿದೆ.
ಸೆಪ್ಟೆಂಬರ್ 22ರಿಂದ ಜಾತಿಗಣತಿ ಶುರುವಾಗಿದೆ. 3 ದಿನ ಕಳೆದರೂ ಸಮಸ್ಯೆ ತಪ್ಪಿಲ್ಲ. ನೆಟ್‌ವರ್ಕ್, ತರಬೇತಿ ಸೇರಿದಂತೆ ಒಂದಿಲ್ಲೊಂದು ವಿಘ್ನ ಎದುರಾಗುತ್ತಲೇ ಇದೆ. ಬೀದರ್ ಜಿಲ್ಲೆಯಲ್ಲಿ ಸುಮಾರು 3.69 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. 3,381 ಶಿಕ್ಷಕರು ಗಣತಿ ಮಾಡ್ತಿದ್ದಾರೆ.
ದಿನಕ್ಕೆ 10 ಕುಟುಂಬಗಳ ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ ಮಾಡಬೇಕೆಂಬ ಗುರಿ ನೀಡಲಾಗಿದೆ. ಆದ್ರೆ ನೆಟ್‌ವರ್ಕ್ ಇಲ್ಲದೇ ಗಣತಿ ಕಾರ್ಯ ನಿಧಾನವಾಗ್ತಿದೆ. ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.