ಸಾಹಿತಿ S.L ಭೈರಪ್ಪ ‘ವಿಲ್’ ಬರೆಸಿದ್ದು ಯಾವಾಗ?

ಹಿರಿಯ ಸಾಹಿತಿ, ಕನ್ನಡ ಕಾದಂಬರಿಗಳ ದಂತಕಥೆ ಎಸ್‌.ಎಲ್ ಭೈರಪ್ಪ ಅವರ ಅಂತ್ಯಕ್ರಿಯೆ ಇಂದು ಮೈಸೂರಿನಲ್ಲಿ ನೆರವೇರಲಿದೆ. ಭೈರಪ್ಪ ಅವರ ಮಗ ಲಂಡನ್‌ನಿಂದ ಬರುವಿಕೆಗೆ ಕಳೆದ 2 ದಿನಗಳಿಂದ ಕಾಯಲಾಗುತ್ತಿತ್ತು. ಇದೀಗ ಅಂತಿಮ ವಿಧಿ ವಿಧಾನಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ಸರಸ್ವತಿ ಪುತ್ರ ಎಸ್.ಎಲ್. ಭೈರಪ್ಪನವರ ಅಂತಿಮ ವಿಧಿವಿಧಾನ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಭೈರಪ್ಪನವರ ಅಂತ್ಯಕ್ರಿಯೆಗೂ ಮುನ್ನ ಅವರು ಬರೆದ ವಿಲ್ ನಿನ್ನೆ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ವಿಲ್ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನಡೆಸುವ ವಿಚಾರದಲ್ಲಿ ಸಾಕಷ್ಟು ಚರ್ಚೆಯಾಗಿದೆ.

ಎಸ್‌.ಎಲ್ ಭೈರಪ್ಪನವರು ತಮ್ಮ ಮಕ್ಕಳು ಅಂತ್ಯಕ್ರಿಯೆ ನಡೆಸದಂತೆ ವಿಲ್ ಮಾಡಿದ್ದಾರೆ. ಮೈಸೂರಲ್ಲಿ ಅಭಿಯಾನಿಯೊಬ್ಬರು ಈ ವಿಲ್‌ ಪ್ರದರ್ಶಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ಅಂತ್ಯಕ್ರಿಯೆಯನ್ನು ಇಬ್ಬರು ಮಕ್ಕಳಾದ ಉದಯ ಶಂಕರ್‌ ಹಾಗೂ ರವಿಶಂಕರ್‌ ಮಾಡುವಂತಿಲ್ಲ ಎಂದು ಭೈರಪ್ಪನವರು ವಿಲ್‌ ಮಾಡಿಸಿಟ್ಟಿದ್ದಾರೆ ಎಂದು ವಿಲ್‌ ಪ್ರತಿಯನ್ನು ಪ್ರದರ್ಶಿಸಿದ್ದಾರೆ.

ಎಸ್.ಎಲ್ ಭೈರಪ್ಪನವರು ಈ ವಿಲ್‌ ಅನ್ನು 2025ರ ಜೂನ್ 18ರಂದು ಬರೆಸಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಹೆಚ್ಚುವರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈ ವಿಲ್ ಮಾಡಿಸಲಾಗಿದೆ. ಇದರ ಪ್ರಕಾರ ಇಬ್ಬರು ಮಕ್ಕಳಾದ ಉದಯಶಂಕರ್‌, ರವಿ ಶಂಕರ್‌ ಅಂತ್ಯ ಸಂಸ್ಕಾರ ಮಾಡಬಾರದು. ಹಾಸನದ ಚನ್ನಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಬೇಕು. ತಮ್ಮನ್ನು ಆರೈಕೆ ಮಾಡಿದ ಸಹನಾ ವಿಜಯಕುಮಾರ್‌ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂದು ಉಲ್ಲೇಖಿಸಿದ್ದಾರೆ.

ಮೈಸೂರಿನ ಕಿಂದರಿಜೋಗಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಾಮಾಜಿಕ ಜಾಲತಾಣದಲ್ಲೂ ವಿಲ್‌ ಪ್ರತಿಗಳು ಹರಿದಾಡಲು ಶುರುವಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಭಿಮಾನಿಯನ್ನು ವಶಕ್ಕೆ ಪಡೆದು ಕರೆದೊಯ್ದರು. ಈ ಗೊಂದಲದ ಮಧ್ಯೆ ಇಂದು ಭೈರಪ್ಪನವರ ಕೋರಿಕೆಯಂತೆ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಮುಂದಾಗಿದ್ದಾರೆ.

About The Author