Dharwad News: ಲೋಕ ಅದಾಲತ್‌ನಲ್ಲಿ 15 ಜೋಡಿಗಳ ಮಿಲನ

Dharwad News: ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ 15 ಜೋಡಿಗಳು, ಇಂದು ಮತ್ತೆ ಒಂದಾಗಿ ಹೊಸ ಜೀವನ ಆರಂಭಿಸುವ ಅಪರೂಪದ ದೃಶ್ಯಕ್ಕೆ ಧಾರವಾಡ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಯಿತು. ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಮನವೊಲಿಕೆ ಮತ್ತು ಸಮಾಲೋಚನೆಯ ಬಳಿಕ ವರ್ಷಗಳ ವೈಮನಸ್ಸು ಮರೆತು ದಂಪತಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಹೊಸ ಬದುಕಿನತ್ತ ಹೆಜ್ಜೆ ಇಟ್ಟರು.

ಧಾರವಾಡ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಹಾಗೂ ವಿವಿಧ ಕಾರಣಗಳಿಂದ ಹಲವು ವರ್ಷಗಳಿಂದ ದೂರವಾಗಿದ್ದ ದಂಪತಿಗಳ ಪ್ರಕರಣಗಳನ್ನು ಪರಿಗಣಿಸಲಾಯಿತು. ನ್ಯಾಯಾಲಯದ ಸಮಾಲೋಚನೆ ಮತ್ತು ಮನವೊಲಿಕೆ ಫಲ ನೀಡಿದ ಪರಿಣಾಮ 15 ಜೋಡಿಗಳು ಮತ್ತೆ ಒಂದಾಗಿ ಬದುಕಲು ಒಪ್ಪಿಗೆ ಸೂಚಿಸಿದರು.

ನ್ಯಾಯಾಧೀಶ ನಾಗರಾಜಪ್ಪ ಎ.ಕೆ. ಅವರ ನೇತೃತ್ವದಲ್ಲಿ ನಡೆದ ಸಮಾಲೋಚನೆಯಲ್ಲಿ ದಂಪತಿಗಳಿಗೆ ಪರಸ್ಪರ ಅರ್ಥೈಸಿಕೊಳ್ಳುವಂತೆ ತಿಳಿಸಲಾಯಿತು. ಬಳಿಕ ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು ಹೊಸ ಜೀವನ ಆರಂಭಿಸುವ ಸಂಕಲ್ಪ ಮಾಡಿದರು. ನ್ಯಾಯಾಲಯದ ಆವರಣ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಕೆಲವು ಜೋಡಿಗಳು 10 ರಿಂದ 15 ವರ್ಷಗಳ ಕಾಲ ದೂರವಿದ್ದು, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಲೋಕ ಅದಾಲತ್‌ನ ಮೂಲಕ ಮತ್ತೆ ಒಂದಾಗಿದ್ದು, ಕುಟುಂಬಸ್ಥರು, ನ್ಯಾಯಾಧೀಶರು ಹಾಗೂ ವಕೀಲರು ಶುಭ ಹಾರೈಸಿದರು. ಹೊಸ ಬದುಕಿನತ್ತ ಹೆಜ್ಜೆ ಇಟ್ಟ ದಂಪತಿಗಳ ಮುಖದಲ್ಲಿ ಸಂತಸ ಮನೆ ಮಾಡಿತ್ತು.

ಒಟ್ಟಾರೆ, ಕಾನೂನು ಹೋರಾಟಕ್ಕಿಂತ ಸಂಧಾನವೇ ಶ್ರೇಷ್ಠ ಎಂಬ ಸಂದೇಶವನ್ನು ಧಾರವಾಡ ಲೋಕ ಅದಾಲತ್ ಮತ್ತೊಮ್ಮೆ ಸಾರಿದೆ. ವರ್ಷಗಳ ವೈಮನಸ್ಸಿಗೆ ತೆರೆ ಎಳೆದು 15 ಜೋಡಿಗಳು ಮತ್ತೆ ಒಂದಾಗಿ ಹೊಸ ಜೀವನ ಆರಂಭಿಸಿರುವುದು ನ್ಯಾಯಾಲಯದ ಮಾನವೀಯ ಮುಖವನ್ನು ಅನಾವರಣಗೊಳಿಸಿದ್ದು, ಹಲವರ ಬದುಕಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿದೆ.

About The Author