ಸ್ವಂತ ಮನೆ ಕಟ್ಟುವ ಕನಸು ಕಂಡವರಿಗೆ, ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ 1200 ಚದರಡಿ ವಿಸ್ತೀರ್ಣದವರೆಗಿನ ನಿವೇಶನಗಳಿಗೆ, ಒಸಿಯಿಂದ ವಿನಾಯಿತಿ ಕೊಡಲಾಗಿದೆ.
ನಕ್ಷೆ ಮಂಜೂರಾತಿ ಪಡೆದು ನಿರ್ದಿಷ್ಟ ಮಹಡಿವರೆಗಿನ ಮಿತಿಯಲ್ಲಿ ನಿರ್ಮಾಣಗೊಂಡಿರುವ ಹಾಗೂ ಹೊಸದಾಗಿ ನಿರ್ಮಿಸುವ ವಾಸದ ಕಟ್ಟಡಗಳಿಗೆ, ವಿನಾಯಿತಿ ನೀಡುವ ತೀರ್ಮಾನ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಒಸಿಗೆ ವಿನಾಯಿತಿ ನೀಡಿರುವ ವಾಸದ ಕಟ್ಟಡಗಳ ನಿರ್ಮಾಣಕ್ಕೆ, ಆರಂಭಿಕ ಪ್ರಮಾಣ ಪತ್ರ ಪಡೆಯುವ ಅಗತ್ಯವಿಲ್ಲ ಎಂದು ಮೂಲಗಳು ಹೇಳಿವೆ. ಹಾಗಾಗಿ, ನಿವೇಶನದಾರರಿಗೆ ಒಸಿ ಮತ್ತು ಸಿಸಿ ಎರಡರಿಂದಲೂ ವಿನಾಯಿತಿ ಸಿಕ್ಕಂತಾಗಲಿದೆ.ಈ ಬಗ್ಗೆ ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಕಚೇರಿಯಿಂದಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಸುಪ್ರೀಂಕೋರ್ಟ್ ಆದೇಶದನ್ವಯ ಎಸ್ಕಾಂಗಳು ವಿದ್ಯುತ್ ಸಂಪರ್ಕ ಪಡೆಯಲು ಓಸಿ ಕಡ್ಡಾಯ ಮಾಡಿದ್ದವು. ಆದರೆ, ನಕ್ಷೆ ಮಂಜೂರಾತಿ ಇಲ್ಲದೆ ಓಸಿ ನೀಡಲು ಅವಕಾಶವಿರಲಿಲ್ಲ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 3.30 ಲಕ್ಷ ಕಟ್ಟಡಗಳು ನಿರ್ಮಾಣ ಪೂರ್ಣಗೊಂಡರೂ, ಓಸಿ ಇಲ್ಲದೆ ವಿದ್ಯುತ್ ಸಂಪರ್ಕ ನೀಡಿರಲಿಲ್ಲ.
ಬೆಂಗಳೂರು ವ್ಯಾಪ್ತಿಯಲ್ಲಿ ಕಟ್ಟಡದ ನಕ್ಷೆಗೆ ಅನುಮೋದನೆ ಪಡೆಯದೆ ಕಟ್ಟಡ ನಿರ್ಮಿಸಿ, ವಿದ್ಯುತ್ ಸಂಪರ್ಕ ಕೋರಿ ಸಲ್ಲಿಕೆಯಾಗಿರುವ ಲಕ್ಷಾಂತರ ಅರ್ಜಿಗಳು ಬಾಕಿ ಇವೆ. ಇಂಥಾ ಅರ್ಜಿಗಳನ್ನು ವಿಲೇವಾರಿ ಮಾಡಲು ಪ್ರತ್ಯೇಕ ಕಾನೂನು ರಚಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.