ಭಾರತ ಮತ್ತು ಪಾಕಿಸ್ತಾನ – ಕ್ರಿಕೆಟ್ ಲೋಕದ ಸಾಂಪ್ರದಾಯಿಕ ಎದುರಾಳಿಗಳು 41 ವರ್ಷಗಳ ಏಷ್ಯಾ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಭಾನುವಾರ ರಾತ್ರಿ 8 ಗಂಟೆಗೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮಹಾಮುಖಾಮುಖಿ ಕ್ರಿಕೆಟ್ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದೆ. ಗುಂಪು ಹಂತ ಮತ್ತು ಸೂಪರ್ 4 ಹಂತದ ಎಲ್ಲಾ ಆರು ಪಂದ್ಯಗಳಲ್ಲಿ ಗೆದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಅಜೇಯ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದ್ದು, ಪಾಕಿಸ್ತಾನ ತನ್ನ ಆರನೇ ಫೈನಲ್ಗಾಗಿ ಹೋರಾಡುತ್ತಿದೆ.
ಕಳೆದ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಪ್ರಾಬಲ್ಯ ಸಾಧಿಸಿರುವ ಭಾರತ ಪ್ರಶಸ್ತಿಗೆ ನೆಚ್ಚಿನ ತಂಡ. ಆದರೆ ಇಡೀ ಟೂರ್ನಿಯಲ್ಲೂ ತನ್ನ ಸಂಪೂರ್ಣ ಶಕ್ತಿ ತೋರಿಸಲು ವಿಫಲವಾಗಿದೆ. ಅಭಿಷೇಕ್ ಶರ್ಮ, ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಹಾಗೂ ಬುಮ್ರಾ, ಅರ್ಷದೀಪ್, ವರಣ್ ಚಕ್ರವರ್ತಿ ಅವರ ಬೌಲಿಂಗ್ ಮೇಲೆ ಅವಲಂಬಿತವಾಗಿರುವ ಭಾರತ, ಇವರಲ್ಲಿ ಯಾರಾದರೂ ವೈಫಲ್ಯ ಕಂಡರೆ ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಕ್ಷೇತ್ರರಕ್ಷಣೆಯ ವೈಫಲ್ಯವೂ ಫೈನಲ್ನಲ್ಲಿ ಭಾರತಕ್ಕೆ ತಲೆನೋವು ತರಬಹುದು.
ಮತ್ತೊಂದೆಡೆ ಹಿಂದಿನ ಸೋಲುಗಳ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಬಾಯಾರಿಕೆಯಿಂದ ಎದುರು ನೋಡುತ್ತಿದೆ. ಭಾರತೀಯ ಆಟಗಾರರ ಹಸ್ತಲಾಘವ ನಿರಾಕರಣೆಯಿಂದಲೇ ಆಕ್ರೋಶಗೊಂಡಿರುವ ಪಾಕಿಸ್ತಾನ ತಂಡ, ಈ ಬಾರಿ ಪ್ರಶಸ್ತಿ ಗೆದ್ದು ಭಾರತಕ್ಕೆ ಆಘಾತ ನೀಡಲು ಬಯಸಿದೆ. ಆದರೆ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠನಾಗಿರುವ ಟೀಮ್ ಇಂಡಿಯಾಗೆ ತಕ್ಕ ಪ್ರತಿರೋಧ ನೀಡಲು ಪಾಕಿಸ್ತಾನ ಎಷ್ಟರ ಮಟ್ಟಿಗೆ ಸಿದ್ಧ ಎಂಬುದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದಿರುವ ಪ್ರಶ್ನೆಯಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

