Political News: ಕಾವೇರಿ ಆರತಿಗೆ ಎಲ್ಲರೂ ಪ್ರೀತಿಯಿಂದ ಬೆರೆಯೋಣ: ಸಚಿವ ಎನ್ ಚಲುವರಾಯಸ್ವಾಮಿ

Political News: ಕಾವೇರಿ ಆರತಿಯನ್ನು ಕೆಲವರು ವಿರೋಧಿಸಿ ಕೋರ್ಟ್ ಗೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ವಿರೋಧಿಸುವವರು ಕೂಡ ಮನಸ್ಸು ಬದಲಿಸಲಿದ್ದಾರೆ. ಕಾವೇರಿ ಆರತಿಗೆ ಎಲ್ಲರೂ ಪ್ರೀತಿಯಿಂದ ಬೆರೆಯೋಣ, ಅನುಬಂಧ ಬೆಸೆಯೋಣ ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಇಂದು ಕೆ.ಆರ್.ಎಸ್ ನಲ್ಲಿ ನಡೆಯುತ್ತಿರುವ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗಂಗೆಯನ್ನು ಸಂತೃಪ್ತಿಗೊಳಿಸಲು ಉತ್ತರದಲ್ಲಿ ಗಂಗಾ ಆರತಿ ಮಾಡುತ್ತಿರುವಂತೆ ಕರ್ನಾಟಕದ ಜೀವನದಿ ಕಾವೇರಿಗೆ ನಮಿಸಿ ವಂದಿಸಬೇಕು. ಕೆಆರ್ ಎಸ್ ನಲ್ಲಿ ಕಾವೇರಿ ಆರತಿ ಆಯೋಜಿಸಬೇಕೆಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತೀರ್ಮಾನಿಸಿದರು. ಆದರೆ ಕೆಲವರು ಇದನ್ನು ವಿರೋಧಿಸಿ ಕೋರ್ಟ್ ಗೆ ಹೋದರು ಎಂದರು.

ಕುಡಿಯುವ ನೀರು, ವ್ಯವಸಾಯಕ್ಕೆ ಉಪಯೋಗಿಸುವ ಕಾವೇರಿ, ತಮಿಳುನಾಡಿನ ಜನರು ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದ್ದಾಳೆ. ಪ್ರಕೃತಿಗೆ ನಮನ ಸಲ್ಲಿಸುವ ದೃಷ್ಟಿಯಿಂದ ಕಾವೇರಿ ಆರತಿ ಆಯೋಜಿಸಲಾಗಿದೆ. ಸದ್ಯ ಈ ವಿಚಾರ ಕೋರ್ಟ್ ನಲ್ಲಿ ಇರುವುದರಿಂದ ಸಾಂಕೇತಿಕವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಹೇಳಿದರು.

ನದಿಗೆ ನಮನ ಸಲ್ಲಿಸುವುದು ಅನಾದಿಕಾಲದಿಂದಲೂ ಬಂದಿರುವ ವಾಡಿಕೆ: ಮುಕ್ತಿದಾನಂದ ಸ್ವಾಮೀಜಿ

ನದಿಗಳಿಗೆ ನಮನ ಸಲ್ಲಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ.‌ ಪ್ರಕೃತಿಯನ್ನು ಪೂಜಿಸಿ ಆರಾಧಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ.‌ ಅದೇ ರೀತಿ ಕಾವೇರಿ ಸನ್ನಿಧಿಯಲ್ಲಿ ಕಾವೇರಿಗೆ ನಮನ ಸಲ್ಲಿಸುವ ಕಾರ್ಯವನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಮುಕ್ತಿದಾನಂದ ಸ್ವಾಮೀಜಿ ಹೇಳಿದರು.

ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮಗೆ ಅನ್ನ ಕೊಡುವ ಮಾತೆಗೆ ಶೃದ್ಧೆಯಿಂದ ನಮಿಸಿ ಅವಳ ಕೃಪೆಗೆ ಪಾತ್ರರಾಗುವ ಅವಕಾಶ ಸಿಕ್ಕಿದೆ. ಇದೊಂದು ಪವಿತ್ರ ಕಾರ್ಯ ಎಂದರು.

ಕಾವೇರಿ ಆರತಿ ದಸರಾ ಹಬ್ಬದ ಮುಖ್ಯ ಅಂಗವಾಗಬೇಕೆಂಬ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಅಭಿಲಾಷೆಯಂತೆ ಕಾವೇರಿ ಆರತಿಯನ್ನು ಆಯೋಜಿಸಲಾಗಿದೆ. ದಕ್ಷಿಣ ಕರ್ನಾಟಕದ ಜೀವನದಿ, ಕೋಟ್ಯಂತರ ಜನರ ದಾಹ ನೀಗಿಸುವ ರೈತರ ಬಾಳು ಬೇಳಗುವ ಈ ಜೀವನದಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡರು,
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ಡಾ. ಕುಮಾರ್, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೃಷ್ಣರಾಜ ಸಾಗರದಲ್ಲಿ ಜನಪ್ರವಾಹ

ಸೆ.26ರಿಂದ ಕೆಆರ್ ಎಸ್ ನ ಬೃಂದಾವನದಲ್ಲಿ ಸಾಂಕೇತಿಕವಾಗಿ ಆರಂಭವಾಗಿರುವ “ಕಾವೇರಿ ಆರತಿ” ಕಾರ್ಯಕ್ರಮದ ಮೂರನೇ ದಿನವೂ ಜನಸಾಗರವೇ ಹರಿದುಬಂದಿತ್ತು. ಕೃಷ್ಣರಾಜ ಸಾಗರದಲ್ಲಿ ಹರಿದು ಬಂದ ಜನಪ್ರವಾಹ “ಕಾವೇರಿ ಆರತಿ” ಕಾರ್ಯಕ್ರಮದ ಯಶಸ್ಸಿನ ಸೂಚಕವಾಗಿತ್ತು.

ಕಾವೇರಿ ಆರತಿ ವೀಕ್ಷಣೆಗಾಗಿ ಕೆಆರ್ ಎಸ್ ಗೆ ಹರಿದು ಬರುತ್ತಿರುವ ಜನಸಾಗರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ “ಕಾವೇರಿ ಆರತಿ” ಮೇಲಿನ ನಂಬಿಕೆ, ವಿಶ್ವಾಸಕ್ಕೆ ಸಾಕ್ಷಿಯಾಗಿತ್ತು. ಮಂಡ್ಯ, ಮೈಸೂರು ಜಿಲ್ಲೆಯಿಂದ ಮಾತ್ರವಲ್ಲದೆ ರಾಜ್ಯ, ದೇಶದ ನಾನಾ ಭಾಗಗಳಿಂದ ಕೆಆರ್ ಎಸ್ ಗೆ ಆಗಮಿಸಿ ಕಾವೇರಿ ಆರತಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕಾವೇರಿ ಆರತಿಯಂತಹ ಧಾರ್ಮಿಕ ಆಚರಣೆ ಜೊತೆಗೆ ಮಂಡ್ಯದ ಸೊಗಡನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಖ್ಯಾತ ಕಲಾವಿದರ ಗಾಯನ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದುಕೊಟ್ಟಿವೆ.

ಕಾವೇರಿ ಆರತಿ ಪೂಜಾ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಲೇಸರ್ ಶೋ, ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ, ಲಕ್ಷ್ಮಿ ನಾಗರಾಜ್, ಇಂದು ನಾಗರಾಜ್ ರವರಿಂದ ಗಾನಸುಧೆ ಕಾರ್ಯಕ್ರಮ ನಡೆಯಿತು.

About The Author