Dharwad: ಧಾರವಾಡ: ಕಳೆದ ಐದಾರು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದೇ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ವಯಸ್ಸು ಮೀರುತ್ತಿದ್ದು, ನೇಮಕಾತಿಯಲ್ಲಿನ ವಯಸ್ಸನ್ನು ಸಡಿಲಿಸಿ ಕೂಡಲೇ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ರಾಜ್ಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.
ಕಳೆದ ವಾರವಷ್ಟೇ ಸಾವಿರಾರು ಜನ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಧಾರವಾಡದ ಲಿಂಗಾಯತ ಭವನದಿಂದ ಧಾರವಾಡದ ಜ್ಯುಬಿಲಿ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸುವುದರೊಂದಿಗೆ ಜ್ಯುಬಿಲಿ ವೃತ್ತವನ್ನು ಹಲವು ಗಂಟೆಗಳ ಕಾಲ ಬಂದ್ ಮಾಡಿದ್ದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪರೀಕ್ಷಾರ್ಥಿಗಳು ನೇಮಕಾತಿಯಲ್ಲಿನ ವಯಸ್ಸನ್ನು ಸಡಿಲಿಸಿ, ಖಾಲಿ ಇರುವ ಪೊಲೀಸ್ ಪೇದೆ, ಪಿಎಸ್ಐ ಸೇರಿದಂತೆ ಇತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಪರೀಕ್ಷಾರ್ಥಿಗಳು ಸೇರಿ ನಡೆಸಿದ್ದ ಈ ಪ್ರತಿಭಟನೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಇದೀಗ ಈ ಪ್ರತಿಭಟನೆ ಬೆನ್ನಲ್ಲೇ ರಾಜ್ಯ ಸರ್ಕಾರ ಪರೀಕ್ಷಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಮೂರು ವರ್ಷ ವಯಸ್ಸಿನಲ್ಲಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಪರೀಕ್ಷಾರ್ಥಿಗಳಿಗೇನೋ ಖುಷಿಯಾಗಿದ್ದು, ಇನ್ನು ವಿವಿಧ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಅಸ್ತು ಎನ್ನಬೇಕಿದೆ.




