ರಾಜ್ಯದ 16 ಜಿಲ್ಲೆಗಳ KPCC ಅಧ್ಯಕ್ಷರ ಬದಲಾವಣೆ – 650 ನಿರ್ದೇಶಕರ ಪಟ್ಟಿ ಸಿದ್ಧ !

ರಾಜ್ಯದ ಸುಮಾರು 16 ಜಿಲ್ಲೆಗಳ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ತೀರ್ಮಾನಿಸಲಾಗಿದೆ. ಈ ಬಾರಿಗೆ ಆಯ್ಕೆ ಪ್ರಕ್ರಿಯೆ ಭಿನ್ನವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಇದೇ ಮೊದಲ ಬಾರಿಗೆ ಜಿಲ್ಲೆಯ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಹೈಕಮಾಂಡ್ ನೇರವಾಗಿ ಒಳಗೊಳ್ಳಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಲಿ ಅಧ್ಯಕ್ಷರಲ್ಲಿ ಹಲವರು ದೀರ್ಘಕಾಲದಿಂದ ಅಧಿಕಾರದಲ್ಲಿದ್ದಾರೆ. ಕೆಲವು ನಿಗಮ ಮಂಡಳಿಯಲ್ಲೂ ಸ್ಥಾನ ಪಡೆದಿದ್ದಾರೆ. ಹೀಗಾಗಿ ಈ ಬದಲಾವಣೆ ಅನಿವಾರ್ಯವಾಗಿದೆ ಎಂದು ವಿವರಿಸಿದರು.

ಸಂಘಟನೆ ವರ್ಷದ ಭಾಗವಾಗಿ ಹೈಕಮಾಂಡ್ ತಂಡ ಅಧ್ಯಕ್ಷರ ಆಯ್ಕೆ ಮಾಡಲಿದೆ. ಪಕ್ಷಕ್ಕೆ ದುಡಿದವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. 650 ನಿರ್ದೇಶಕರ ಪಟ್ಟಿ ಸದ್ಯದಲ್ಲೇ ಪ್ರಕಟವಾಗಲಿದೆ. ಗಾಂಧಿ ತತ್ವಗಳನ್ನು ಯುವ ಪೀಳಿಗೆಗೆ ತಲುಪಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಡಿಕೆಶಿ ಹೇಳಿದ್ದಾರೆ.

ಮಹಾತ್ಮಾ ಗಾಂಧಿ ಅವರು ಜನಿಸಿ 156 ವರ್ಷಗಳು ಆಗಿವೆ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶತಮಾನ ಕಳೆದಿವೆ. ನೀವೆಲ್ಲರೂ ಬೆಳಗಾವಿಗೆ ಬಂದು ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಭಾಗವವಹಿಸಿದ್ದೀರಿ. ಇಡೀ ವರ್ಷವನ್ನು ಸಂಘಟನೆ ವರ್ಷವಾಗಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಅದರ ಕೆಲಸ ನಡೆಯುತ್ತಿದೆ. ಅನೇಕ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.

ನಿಮ್ಮ ಪರಿಶ್ರಮವನ್ನು ಪಕ್ಷ ಗುರುತಿಸುತ್ತದೆ. ಪಕ್ಷಕ್ಕೆ ದುಡಿದವರಿಗೆ ನಾವು ನಿಗಮಮಂಡಳಿಯಲ್ಲಿ ನೇಮಕ ಮಾಡಿದ್ದೇವೆ. ಸಧ್ಯದಲ್ಲೇ 650 ನಿರ್ದೇಶಕರ ಪಟ್ಟಿ ಕೂಡ ಅಂತಿಮವಾಗಲಿದೆ. ಎರಡು ಮೂರು ದಿನಗಳಲ್ಲಿ ಪಟ್ಟಿ ಪ್ರಕಟಿಸುತ್ತೇವೆ. ಎರಡು ವರ್ಷಗಳ ನಂತರ ಕೆಲವು ಅಧ್ಯಕ್ಷರು ರಾಜೀನಾಮೆ ನೀಡಲಿದ್ದು, ಬೇರೆಯವರಿಗೆ ಅಧಿಕಾರವನ್ನು ನೀಡಲಾಗುವುದು. ನಾವು ಎಲ್ಲರಿಗೂ ಅಧಿಕಾರವನ್ನು ಹಂಚಿ ಪ್ರೋತ್ಸಾಹ ನೀಡುತ್ತೇವೆ ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author