ರಾಜಧಾನಿಯಲ್ಲೇ ಭಯದ ಸ್ಥಿತಿ : ಮಹಿಳೆಯರ ಕುತ್ತಿಗೆಗೆ ‘ಲಾಂಗ್’ ಇಟ್ಟು ಸರಗಳ್ಳತನ

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಹೊಸ ವರದಿ ಸ್ಪಷ್ಟಪಡಿಸಿದೆ. 2023ರ NCRB ವರದಿ ಪ್ರಕಾರ, ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಕಳೆದ ಎರಡು ವರ್ಷಗಳಲ್ಲಿ ಶೇ.40ರಷ್ಟು ಹೆಚ್ಚಾಗಿವೆ ಎಂಬ ಆಘಾತಕಾರಿ ಅಂಕಿ-ಅಂಶ ಹೊರಬಿದ್ದಿದೆ.

ಇದರ ನಡುವೆಯೇ, ಬೆಂಗಳೂರಿನಲ್ಲಿ ಕಳೆದ ತಿಂಗಳ 10ರಂದು ಒಂದೇ ದಿನದಲ್ಲಿ ಮಹಿಳೆಯರ ಕುತ್ತಿಗೆಗೆ ಲಾಂಗ್ ಹಿಡಿದು ಐದು ಕಡೆ ಚೈನ್ ಸ್ನ್ಯಾಚ್ ಮಾಡಿದ ಪ್ರಕರಣ ದಾಖಲಾಗಿತ್ತು. ಜೈಲಿನಲ್ಲಿ ಇದ್ದಾಗ ಸ್ನೇಹ ಬೆಳೆಸಿಕೊಂಡಿದ್ದ ಇಬ್ಬರು ಆರೋಪಿಗಳು ಬಿಡುಗಡೆಯಾದ ಬಳಿಕ ಸರಗಳ್ಳತನದ ದಾರಿಯನ್ನು ಹಿಡಿದಿದ್ದರು. ಗಣೇಶ ಹಬ್ಬದ ಸಂಭ್ರಮದ ಮಧ್ಯೆ ಸರಗಳ್ಳತನದ ಘಟನೆಗಳು ನಗರವನ್ನೇ ಬೆಚ್ಚಿಬೀಳಿಸಿದವು. ಪೊಲೀಸರು ಈ ಪ್ರಕರಣದಲ್ಲಿ ರಾಮನಗರ ಮೂಲದ ಪ್ರವೀಣ್ ಎಂಬಾತನನ್ನು ಬಂಧಿಸಿದ್ದು, ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸುತ್ತಿದ್ದ ಯೋಗಾನಂದ್‌ನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಒಂದೇ ರಾತ್ರಿಯಲ್ಲಿ ಪ್ರವೀಣ್ ಮತ್ತು ಯೋಗಾನಂದ್ ಗಿರಿನಗರ, ಹನುಮಂತನಗರ ಹಾಗೂ ಕೋಣನಕುಂಟೆ ಸೇರಿದಂತೆ ಐದು ವಿಭಿನ್ನ ಸ್ಥಳಗಳಲ್ಲಿ ಸರಗಳ್ಳತನ ನಡೆಸಿದ್ದರು. ಕಳ್ಳತನದ ವೇಳೆ ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸುವ ಮೂಲಕ ಅವರು ಸರ ಕಿತ್ತುಕೊಂಡಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಗಿರಿನಗರದಲ್ಲಿ ಈ ಇಬ್ಬರಿಗೆ ಮಹಿಳೆಯೊಬ್ಬರು ಪ್ರತಿರೋಧ ತೋರಿದಾಗ, ಆರೋಪಿಗಳು ಲಾಂಗ್ ಬೀಸಿ ದಾಳಿ ನಡೆಸಿದ್ದರು. ಸೆಪ್ಟೆಂಬರ್ 14ರಂದು ನಡೆದ ಈ ದಾಳಿಯಲ್ಲಿ ಮಹಿಳೆಯೊಬ್ಬರ ಕೈಬೆರಳು ಕತ್ತರಿಸುವಷ್ಟು ಗಂಭೀರ ಘಟನೆ ಸಂಭವಿಸಿತ್ತು. ಈ ಘಟನೆ ಮತ್ತು NCRB ವರದಿ ಒಟ್ಟುಗೂಡಿದಾಗ, ಬೆಂಗಳೂರಿನ ಭದ್ರತಾ ಪರಿಸ್ಥಿತಿ ಮತ್ತು ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಚರ್ಚೆಗಳು ಶುರುವಾಗಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author