ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ವಿಶೇಷ ಕರ್ತವ್ಯಾಧಿಕಾರಿ ಜ್ಯೋತಿ ಪ್ರಕಾಶ್, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜ್ಯೋತಿ ಪ್ರಕಾಶ್ ಕೆಪಿಟಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದಾರೆ. ಕೆಪಿಟಿಸಿಎಲ್ ಎಸಿ ಕಾಮಗಾರಿಗೆ ಎನ್‌ಒಸಿ ನೀಡಲು, 1 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ರು ಎನ್ನಲಾಗಿದೆ.
ಅಡ್ವಾನ್ಸ್ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ಮಾಡಿದ್ದು, ಜ್ಯೋತಿ ಪ್ರಕಾಶ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಜ್ಯೋತಿ ಪ್ರಕಾಶ್ ಮತ್ತು ಕಾರು ಚಾಲಕ ನವೀನ್‌ರನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆಕ್ಟೋಬರ್ 4ರ ಶನಿವಾರ ರಾತ್ರಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಬ್ಯಾಡರಹಳ್ಳಿ ನಿವಾಸಿ ಅನಂತರಾಜು ಎಂಬುವರು ನೀಡಿದ್ದ ದೂರಿನ ಆಧಾರದ ಮೇಲೆ, ಇಂಧನ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ವಿದ್ಯುತ್ ಮಂಜೂರಾತಿಗಾಗಿ ಡಿಆರ್ ಡೆವಲಪರ್‌ಗೆ ಎನ್‌ಒಸಿ ನೀಡಲು, ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಲಾಗಿದೆ.
ಆರಂಭದಲ್ಲಿ 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಜ್ಯೋತಿ ಪ್ರಕಾಶ್, ಬಳಿಕ 50,000 ರೂಪಾಯಿಗೆ ಒಪ್ಪಿಕೊಂಡಿದ್ದರಂತೆ. ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ, ಕಾರ್ಯಾಚರಣೆ ನಡೆಸಲಾಗಿದೆ. ಲಂಚದ ಹಣವನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆದಿದೆ.