ನವೆಂಬರ್ ಕ್ರಾಂತಿ ಚರ್ಚೆ ಜೋರಾಗ್ತಿದೆ. ಈ ಬೆನ್ನಲ್ಲೇ ದೆಹಲಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ದೌಡಾಯಿಸಿದ್ದಾರೆ. ಇದು ದೆಹಲಿಯಲ್ಲಿ ರಹಸ್ಯ ಕಾರ್ಯತಂತ್ರ ನಡೆಯುತ್ತಿದೆಯಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಕಳೆದ 3 ತಿಂಗಳಲ್ಲಿ 5 ಬಾರಿ ದೆಹಲಿ ಪ್ರವಾಸ ಕೈಗೊಂಡಿದ್ದು, ಈಗ ಮತ್ತೆ ಖಾಸಗಿ ಕೆಲಸಗಳ ನೆಪದಲ್ಲಿ ದೆಹಲಿಗೆ ಡಿಕೆಶಿ ಹೋಗಿದ್ದಾರೆ.
ಇನ್ನು, ಕಳೆದ ಬಾರಿ ವಕೀಲರ ಭೇಟಿ ನೆಪದಲ್ಲಿ ಕೆ.ಸಿ. ವೇಣುಗೋಪಾಲ್‌ರನ್ನು ಭೇಟಿಯಾಗಿದ್ರು. ಈ ಬಾರಿ ಬಿಹಾರ ಚುನಾವಣೆ ನೆಪದಲ್ಲಿ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಆದ್ರೆ, ವರಿಷ್ಠರನ್ನು ಭೇಟಿಯಾಗಲ್ಲ ಅಂತಾ ಡಿಕೆಶಿ ಆಪ್ತ ಬಳಗ ಹೇಳ್ತಿದ್ದಾರೆ. ಆದರೂ ತರಾತುರಿಯಲ್ಲಿ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಇದೀಗ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗಳು ಗರಿಗೆದರಿದ್ದು, ಡಿಕೆ ಡೆಲ್ಲಿ ಪ್ರವಾಸ ನವೆಂಬರ್ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಅಂತಾ ಹೇಳಲಾಗ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಡಿಕೆಶಿ ಬೆಂಬಲಿಗರು ಪದೇ ಪದೇ, ಸಿಎಂ ಬದಲಾವಣೆ ಬಗ್ಗೆ ಹೇಳುತ್ತಲೇ ಇದ್ದಾರೆ. ಜೊತೆಗೆ ಸಿದ್ದರಾಮಯ್ಯ ಆಪ್ತರು ಯಾವುದೇ ಬದಲಾವಣೆ ಇಲ್ಲ ಅಂತಾ ಸ್ಪಷ್ಟೀಕರಣ ನೀಡುತ್ತಲೇ ಇದ್ದಾರೆ. ಕಾಂಗ್ರೆಸ್ ಪಾಳಯದಲ್ಲಿನ ಬೆಳವಣಿಗೆಗಳನ್ನು ನೋಡ್ತಿದ್ರೆ, ಬಿಹಾರ ಚುನಾವಣೆ ಬಳಿಕ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಭಾರೀ ಬದಲಾವಣೆ ಸಾಧ್ಯತೆ ಇದೆ.

