ಏಯ್.. ನನ್ನ ನಿಲುವೇನಿಲ್ಲ. ಜನರ ನಿಲುವೇ ನಮ್ಮ ನಿಲುವು. ಅವರು ಏನ್ ಬರೆಸ್ತಾರೋ ಅದನ್ನೇ ಬರೆದುಕೊಳ್ತೀವಿ. ಹೀಗಂತ ಸಿಎಂ ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ರು. ಅದು ಕೂಡ ತಮ್ಮ ಸಂಪುಟದ ಸಹೋದ್ಯೋಗಿ ಮೇಲೆ ಅನ್ನೋದು ಆಶ್ಚರ್ಯ.
ಇವತ್ತು ಸಿದ್ದು ರೋಷಾಗ್ನಿಯಲ್ಲಿ ಬೆಂದಿದ್ದು ಸಚಿವ ಶಿವರಾಜ ತಂಗಡಗಿ. ಸಿದ್ದು ಸಿಟ್ಟಾಗಿದ್ದನ್ನು ಕಂಡ ತಂಗಡಗಿ, 1 ಕ್ಷಣ ತಬ್ಬಿಬ್ಬಾಗಿದ್ರು. ಶಾಸಕ ರಾಘವೇಂದ್ರ ಹಿಟ್ನಾಳ್, ಧರ್ಮಸಿಂಗ್ ಪುತ್ರ ಅಜಯ್ ಸಿಂಗ್, ಕೊಪ್ಪಳ ಜಿಲ್ಲಾ ಮುಖಂಡರು, ಪತ್ರಕರ್ತರು.. ಕಾರ್ಯಕರ್ತರು. ಎಲ್ಲರ ಎದುರೇ ಸಿದ್ದರಾಮಯ್ಯ ಏಕವಚನದಲ್ಲೇ ಗುಡುಗಿದ್ದಾರೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಸಿದ್ದು, ನಗರಕ್ಕೆ ಬಂದಿದ್ರು. ಮಾಧ್ಯಮಗಳ ಎದುರು ಮಾತನಾಡುವಾಗ, ಸಿಎಂ ಕಿವಿ ಬಳಿ ಹೋದ ಶಿವರಾಜ ತಂಗಡಗಿ, ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಹೇಳಿದ್ದಾರೆ. ಮಾಧ್ಯಮಗಳ ಪ್ರಶ್ನೆಯನ್ನು ಪುನರುಚ್ಚರಿಸಿದ್ರು ಅಷ್ಟೇ. ಮುಖಾಮೂತಿ ನೋಡದ ಸಿದ್ದು, ಏಯ್ ಇದರಲ್ಲಿ ನನ್ನ ನಿಲುವೇನಿಲ್ಲ. ಜನರ ನಿಲುವೇ ನಮ್ಮ ನಿಲುವು ಅಂತಾ ಗದರಿದ್ರು.
ಸಿದ್ದು ಕೋಪ ಕಂಡು ಅರೆಕ್ಷಣ ತಂಗಡಗಿ ವಿಚಲಿತರಾಗಿದ್ರು. ಬಳಿಕ ಸಾವರಿಸಿಕೊಂಡು, ಮತ್ತೆ ನಗುತ್ತಲೇ ಸೈಲೆಂಟ್ ಆದ್ರು. ಈ ವೇಳೆ ಸಿದ್ದು ಮಾತನಾಡುವಾಗ ಮತ್ತೆ ಮಧ್ಯಪ್ರವೇಶಿಸಲು ತಂಗಡಗಿ ಮುಂದಾದ್ರು. ಆ ವೇಳೆ ತಂಗಡಗಿ ಬೆನ್ನುತಟ್ಟಿ ಸನ್ನೆ ಮಾಡಿದ ಅಜಯ್ ಸಿಂಗ್ ಸುಮ್ಮನಿರುವಂತೆ ಹೇಳಿದ್ರು. ಒಟ್ನಲ್ಲಿ ಕೊಪ್ಪಳ ನೆಲಕ್ಕೆ ಕಾಲಿಡುತ್ತಿದ್ದಂತೆ ಸಿದ್ದರಾಮಯ್ಯ ರೋಷಾವೇಷ ಹೆಚ್ಚಾಗಿತ್ತು.