ಕಿರುತೆರೆಯ ಅತಿ ಜನಪ್ರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ. ಕಳೆದ ಸೀಸನ್‌ನಲ್ಲಿ ಮಹಿಳಾ ಆಯೋಗದಿಂದ ನೋಟಿಸ್ ಬಂದಿದ್ದರೆ, ಈ ಬಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಬಾಸ್ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದೆ.
ಮಂಡಳಿಯ ಹೇಳಿಕೆಯ ಪ್ರಕಾರ, ಬಿಡದಿ ಸಮೀಪದ ಜಾಲಿವುಡ್ ಸ್ಟುಡಿಯೋದಲ್ಲಿ ನಿರ್ಮಿಸಲಾದ ಬಿಗ್ ಬಾಸ್ ಮನೆಗೆ ತಾಜ್ಯ ನೀರು ಸಂಸ್ಕರಣಾ ಘಟಕ (STP) ಇಲ್ಲ. ಇದರ ಪರಿಣಾಮವಾಗಿ ಸ್ಟುಡಿಯೋದಿಂದ ಹೊರಬರುತ್ತಿರುವ ತ್ಯಾಜ್ಯ ನೀರನ್ನು ಸೂಕ್ತ ರೀತಿಯಲ್ಲಿ ಶುದ್ಧೀಕರಿಸದೆ ಹೊರಗೆ ಬಿಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದರ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಶೋ ಬಂದ್ ಮಾಡುವಂತೆ ನೋಟಿಸ್ ನೀಡಿದೆ.
ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಒಟ್ಟು 19 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು, ಅವರಲ್ಲಿ ಇಬ್ಬರು ಈಗಾಗಲೇ ಎಲಿಮಿನೇಟ್ ಆಗಿದ್ದಾರೆ. ತೆರೆ ಹಿಂದೆ ನೂರಾರು ಮಂದಿ ತಂತ್ರಜ್ಞರು ಕೆಲಸ ಮಾಡುತ್ತಿರುವ ಕಾರಣ, ಶೋ ನಡೆಯುವ ಅವಧಿಯಲ್ಲಿ ದೊಡ್ಡ ಪ್ರಮಾಣದ ತ್ಯಾಜ್ಯ ಉಂಟಾಗುತ್ತಿದೆ ಎಂದು ವರದಿಯಾಗಿದೆ.
ಮಂಡಳಿಯ ವರದಿ ಪ್ರಕಾರ, ಜಾಲಿವುಡ್ ಸ್ಟುಡಿಯೋ ಒಂದು ಅಮ್ಯೂಸ್ಮೆಂಟ್ ಪಾರ್ಕ್ ಆಗಿದ್ದು, ಅಲ್ಲಿಂದ ಪ್ಲಾಸ್ಟಿಕ್, ಪೇಪರ್ ತಟ್ಟೆ, ಲೋಟ ಮುಂತಾದ ತ್ಯಾಜ್ಯಗಳನ್ನು ವೈಜ್ಞಾನಿಕವಲ್ಲದ ರೀತಿಯಲ್ಲಿ ವಿಲೇವಾರಿ ಮಾಡಲಾಗಿದೆ. ಇದರ ಪರಿಣಾಮ ಪರಿಸರ ಮಾಲಿನ್ಯ ಹೆಚ್ಚುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಎಲ್ಲಾ ಅಂಶಗಳನ್ನು ಆಧರಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಟುಡಿಯೋಗೆ ನೋಟಿಸ್ ಜಾರಿ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬಿಗ್ ಬಾಸ್ ಶೋ ನಿಲ್ಲುವ ಸಾಧ್ಯತೆ ಇದೆ. ಈಗ ಆಯೋಜಕರು ಮಂಡಳಿಗೆ ಏನೆಂತಹ ಉತ್ತರ ನೀಡುತ್ತಾರೆ ಎಂಬುದು ಕುತೂಹಲದ ವಿಷಯವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ