ಲಾಟರಿ ಲಾಟರಿ ಬಂಪರ್ ಲಾಟರಿ… ಅದೃಷ್ಟ ಎಂದರೆ ಇದೇ ಇರಬಹುದು. ಆಲಪ್ಪುಳ ಜಿಲ್ಲೆಯ ತುರವೂರಿನ ಶರತ್ ಎಸ್. ನಾಯರ್ ಅವರ ಜೀವನ ಒಂದು ಕ್ಷಣದಲ್ಲಿ ಬದಲಾದಂತಾಗಿದೆ. ನೆಟ್ಟೂರಿನ ನಿಪ್ಪಾನ್ ಪೇಂಟ್ಸ್ ಅಂಗಡಿಯಲ್ಲಿ ಕೆಲಸ ಮಾಡುವ ಈ ಯುವಕ, ಮೊದಲ ಬಾರಿಗೆ ಓಣಂ ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದರು. ಅದೇ ಟಿಕೆಟ್ 2025ರ ಓಣಂ ಬಂಪರ್‌ನಲ್ಲಿ 25 ಕೋಟಿ ರೂಪಾಯಿ ಮೊದಲ ಬಹುಮಾನ ಗೆದ್ದಿದೆ.
ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಸಹೋದ್ಯೋಗಿಗಳೊಂದಿಗೆ ಖುಷಿ ಖುಷಿಯಾಗಿ ಲಾಟರಿ ಟಿಕೆಟ್ ತೆಗೆದುಕೊಂಡ ಶರತ್ ಗೆದ್ದಿದ್ದಾನೆ ಎಂಬುದು ಆರಂಭದಲ್ಲಿ ನಂಬಲಾಗದ ವಿಷಯವಾಗಿತ್ತು. ಫಲಿತಾಂಶ ಮರುಪರಿಶೀಲಿಸಿ ಖಚಿತಪಡಿಸಿಕೊಂಡ ನಂತರ, ಅವರು ತುರವೂರಿನ ಎಸ್‌ಬಿಐ ಬ್ಯಾಂಕ್‌ನಲ್ಲಿ ವಿಜೇತ ಟಿಕೆಟ್ ಸಲ್ಲಿಸಿದರು. ನಾನು ಸಣ್ಣ ಲಾಟರಿಗಳನ್ನು ಮಾತ್ರ ಖರೀದಿಸುತ್ತಿದ್ದೆ. ಬಂಪರ್ ಟಿಕೆಟ್ ತೆಗೆದುಕೊಂಡದ್ದು ಮೊದಲ ಬಾರಿಗೆ. ನಿಜಕ್ಕೂ ಅದೃಷ್ಟ ನನ್ನ ಬಾಗಿಲು ತಟ್ಟಿದೆ ಎಂದು ಅವರು ಹೇಳಿದ್ದಾರೆ.
ಬಿ.ಕಾಂ ಪದವೀಧರರಾದ ಶರತ್ ಕಳೆದ 12 ವರ್ಷಗಳಿಂದ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪೋಷಕರು, ಪತ್ನಿ ಮತ್ತು ಆರು ತಿಂಗಳ ಮಗುವಿನೊಂದಿಗೆ ಸರಳ ಜೀವನ ನಡೆಸುತ್ತಿದ್ದ ಇವರಿಗೆ ಈ ಲಾಟರಿ ಜೀವನ ಬದಲಿಸುವ ಸವಿನೆನಪು.
25 ಕೋಟಿ ಬಹುಮಾನ ಲಭಿಸಿದರೂ ತೆರಿಗೆ ಮತ್ತು ಕಮಿಷನ್ ಸೇರಿದಂತೆ ವಿವಿಧ ಕಡಿತಗಳ ಬಳಿಕ ಅವರಿಗೆ ಸಿಗುವ ಮೊತ್ತ ಸುಮಾರು ₹15.75 ಕೋಟಿ ಆಗಲಿದೆ. ಟಿಕೆಟ್ ಮಾರಾಟ ಮಾಡಿದ ಏಜೆಂಟ್‌ಗೆ ₹2.5 ಕೋಟಿ ಕಮಿಷನ್ ಸಿಗಲಿದೆ. ಭಾಗ್ಯಶಾಲಿ ಶರತ್ ಈಗ ತನ್ನ ಕುಟುಂಬದೊಂದಿಗೆ ಮುಂದಿನ ಹೆಜ್ಜೆ ಬಗ್ಗೆ ಚರ್ಚಿಸಲು ತಯಾರಾಗಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ