ಕುವೈತ್ ಡಿಫೆನ್ಸ್ ಆಸ್ಪತ್ರೆಯಲ್ಲಿ ಉತ್ತಮ ಸಂಬಳದ ಉದ್ಯೋಗ ಸಿಗುತ್ತದೆ, ಕೆಲವು ವರ್ಷಗಳಲ್ಲಿ ಜೀವನ ಸೆಟಲ್ ಮಾಡಿಕೊಳ್ಳಬಹುದು ಎಂಬ ನಂಬಿಕೆ ಮೂಡಿಸಿ 30 ಯುವಕರಿಂದ 52 ಲಕ್ಷ ರೂಪಾಯಿ ವಂಚಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹಿರಂಗವಾಗಿದೆ.
ಹೊನ್ನಾವರ ತಾಲೂಕಿನ ಹೇರಂಗಡಿಯ ಜಾಫರ್ ಸಾದಿಕ್ ಮೋಕ್ತೆಸರ್, ನೌಶಾದ್ ಕ್ವಾಜಾ ಹಾಗೂ ಹೈದರಾಬಾದ್ ಮೂಲದ ಸುಜಾತ ಜಮ್ಮಿ ಎಂಬ ಮೂವರು ಆರೋಪಿಗಳು ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿದ್ದರು. ಕಳೆದ ಡಿಸೆಂಬರ್ನಲ್ಲಿ ಕರ್ನಾಟಕ ಮತ್ತು ಕೇರಳದ ನಿರುದ್ಯೋಗಿ ಯುವಕರಿಗೆ ಕುವೈತ್ ಡಿಫೆನ್ಸ್ ಆಸ್ಪತ್ರೆಯಲ್ಲಿ ಉದ್ಯೋಗ ಖಾಲಿಯಿದೆ ಎಂಬ ನಕಲಿ ಜಾಲತಾಣದ ಪ್ರಕಟಣೆ ತೋರಿಸಿ ಆಮಿಷ ಒಡ್ಡಲಾಗಿತ್ತು. ಕುವೈತ್ನಲ್ಲಿ ಕೆಲಸ ಮಾಡಿದರೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎಂದು ನಂಬಿಸಿ, ಸುಮಾರು 30 ಮಂದಿಯಿಂದ ಒಟ್ಟು ₹52,01,185 ಹಣ ವಸೂಲಾಗಿತ್ತು.
ಮಂಗಳೂರು ಮತ್ತು ಕಾಸರಗೋಡಿನಲ್ಲಿ ಉತ್ತಮ ಸಂಪರ್ಕ ಹೊಂದಿದ್ದ ನೌಶಾದ್, ಜಾಫರ್ನ ಮಾತು ನಂಬಿ ತನ್ನ ಪರಿಚಯದ ಯುವಕರಿಗೂ ಉದ್ಯೋಗದ ವಿಷಯ ತಿಳಿಸಿದ್ದ. ಆಸೆಯಿಂದ ಯುವಕರು ಹಂತ ಹಂತವಾಗಿ ಜಾಫರ್ ಖಾತೆಗೆ ಹಣ ವರ್ಗಾಯಿಸಿದ್ದರು. ಕೆಲವೊಮ್ಮೆ ಜಾಫರ್ ಮೊಬೈಲ್ ಸ್ವಿಚ್ಆಫ್ ಮಾಡುತ್ತಿದ್ದಾಗ ನೌಶಾದ್ ಅನುಮಾನ ವ್ಯಕ್ತಪಡಿಸಿದರೂ, ನನ್ನ ಮೇಲೆ ನಂಬಿಕೆ ಇರದಿರಬಹುದು, ಆದರೆ ಕುವೈತ್ ಡಿಫೆನ್ಸ್ ವೆಬ್ಸೈಟ್ನ ಪ್ರಕಟಣೆಯನ್ನು ನಂಬಿ ಎಂದು ಆತ ಗದರಿಸಿದ್ದ. ಇದರಿಂದ ನೌಶಾದ್ ಮತ್ತಷ್ಟು ಮಂದಿಯಿಂದಲೂ ಹಣ ಸಂಗ್ರಹಿಸಲು ಸಹಾಯ ಮಾಡಿದ್ದ. ಆದರೆ ಒಂದು ವರ್ಷ ಕಳೆದರೂ ಉದ್ಯೋಗದ ಸುಳಿವೇ ಸಿಗದ ಹಿನ್ನೆಲೆಯಲ್ಲಿ ನೌಶಾದ್ ಪುನಃ ವಿಚಾರಿಸಿದಾಗ ಜಾಫರ್ ಮೊಬೈಲ್ ಸ್ವಿಚ್ಆಫ್ ಮಾಡಿ ನಾಪತ್ತೆಯಾಗಿದ್ದಾನೆ.
ಘಟನೆ ಬಹಿರಂಗವಾದ ಬಳಿಕ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದು, ಅವರ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ನೌಶಾದ್ ಕ್ವಾಜಾ ಹೊನ್ನಾವರದಲ್ಲೇ ಇದ್ದು, ಅವನನ್ನು ವಶಕ್ಕೆ ಪಡೆಯುವಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉದ್ಯೋಗದ ಆಸೆಗೆ ಹಣ ಕಳೆದುಕೊಂಡ ಯುವಕರು ಒಂದು ಕಡೆ ಮೋಸಕ್ಕೆ ಬಲಿಯಾಗಿದ್ದರೆ, ಜಾಫರ್ ನಂಬಿ ಮಧ್ಯವರ್ತಿಯಾಗಿ ಕೆಲಸ ಮಾಡಿದ ನೌಶಾದ್ ಇದೀಗ ತ್ರಿಶಂಕು ಸ್ಥಿತಿಯಲ್ಲಿದ್ದಾನೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ