ಬಿಹಾರ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಅವರು ಮಹಾಭಾರತದ ಉಲ್ಲೇಖವನ್ನು ಬಳಸಿ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹೇಳಿಕೆಗೆ ಕಿಡಿ ಹಚ್ಚಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಪಕ್ಷಗಳು ಓಡಿಹೋಗಲಿವೆ ಎಂದು ಲಾಲು ಯಾದವ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯ್ ಸಿನ್ಹಾ, ಲಾಲು ಪ್ರಸಾದ್ ಯಾದವ್ ತಮ್ಮ ಮಗನ ಮೇಲಿನ ಪ್ರೀತಿಯಿಂದ ಕುರುಡರಾದ ಧೃತರಾಷ್ಟ್ರನಂತೆ ವರ್ತಿಸುತ್ತಿದ್ದಾರೆ. ರಾಜಕೀಯದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲಾಲು ಯಾದವ್ ನೀಡಿದ ಸವಾಲಿನ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ವಿಜಯ್ ಸಿನ್ಹಾ, ಮಹಾಭಾರತದ ಧೃತರಾಷ್ಟ್ರನ ಉದಾಹರಣೆ ನೀಡಿ ಲಾಲು ಯಾದವ್ರನ್ನು ಹೋಲಿಸಿದರು. ಮಹಾಭಾರತದಲ್ಲಿ ಧೃತರಾಷ್ಟ್ರನು ಕುರುಡ ರಾಜನಾಗಿದ್ದು, ತನ್ನ 100 ಕೌರವರ ಮಕ್ಕಳ ನಿರ್ಧಾರಗಳನ್ನು ಕುರುಡಾಗಿ ಬೆಂಬಲಿಸುತ್ತಿದ್ದನು. ಇದೇ ರೀತಿಯಾಗಿ ಲಾಲು ಯಾದವ್ ಕೂಡ ತಮ್ಮ ಮಗನ ರಾಜಕೀಯ ನಿರ್ಧಾರಗಳ ಕಡೆ ಕಣ್ಣು ಮುಚ್ಚಿದ್ದಾರೆ ಎಂಬ ಅರ್ಥದಲ್ಲಿದೆ ಎಂದು ವಿಜಯ್ ಸಿನ್ಹಾ ಹೇಳಿದ್ದಾರೆ.
ಇದೇ ವೇಳೆ ಉಪಮುಖ್ಯಮಂತ್ರಿ ಸಮ್ರಾಟ್ ಚೌಧರಿ ಕೂಡ ಲಾಲು ಯಾದವ್ ಅವರ ಹೇಳಿಕೆಗೆ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ. ಲಾಲು ಜೀ ಅವರು ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ಜೊತೆಗೆ ಮತ ಎಣಿಕೆಯ ದಿನವೂ ಆಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆ ದಿನವೇ ಬಿಹಾರ ರಾಜಕೀಯದಲ್ಲಿ ಯಾರು ನಿಜವಾದ ‘ಮಗು’ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಕಟಾಕ್ಷಿಸಿದರು.
ಚುನಾವಣೆಯ ದಿನಾಂಕ ಸಮೀಪಿಸುತ್ತಿರುವಂತೆಯೇ ಎನ್ಡಿಎ ಮತ್ತು ಆರ್ಜೆಡಿ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದ್ದು, ಮಹಾಭಾರತದ ಧೃತರಾಷ್ಟ್ರನ ಉಲ್ಲೇಖದಿಂದ ವಿಜಯ್ ಸಿನ್ಹಾ ನೀಡಿದ ಪ್ರತಿಕ್ರಿಯೆ ಈಗ ಬಿಹಾರ ರಾಜಕೀಯದ ಚರ್ಚೆಯ ಕೇಂದ್ರಬಿಂದುವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ