ಕೆಜಿ ಹಳ್ಳಿ ಮತ್ತು ಡಿಜಿ ಹಳ್ಳಿ ಪ್ರಕರಣದ ಬಗ್ಗೆ ಕೆಲ ಟ್ರೋಲ್‌ಗಳಾಗುತ್ತಿದ್ದು, ಅದರಲ್ಲಿ ಆರೋಪಿಯೊಬ್ಬನ ಸಹೋದರಿ ಕೊತ್ತಂಬರಿ ಸೊಪ್ಪಿನ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಕವಿರಾಜ್ ತಮ್ಮ ಫೇಸ್‌ಬುಕ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕೆಳಗಿನಂತೆ ಬರೆದಿರುವ ಕವಿರಾಜ್ ಟ್ರೋಲ್‌ಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
“ನಮ್ಮಣ್ಣ ರಾತ್ರಿ ಒಂದ್ ಗಂಟೆಗೆ ಕೊತ್ಮಿರಿ ಸಪ್ಪು ತಗಂಡ್ ಬಂದಿದ್ದು, ಅಂಗಡೀನಲ್ಲಿ ಹಾಕೋಕೆ ಇರೋದು ನಮ್ಮಣ್ಣ”
ಕನ್ನಡ ಸರಿಯಾಗಿ ಮಾತಾಡಲು ಬರದ ಉರ್ದು ಮಾತೃಭಾಷೆಯ ಹೆಂಗಸು ಮಾತಾಡಿರುವ ಯಥಾವತ್ತು ಮಾತಿದು. ಇಲ್ಲಿ ಕನ್ನಡ ಬಲ್ಲ ಯಾರಿಗಾದರೂ ತಿಳಿಯುತ್ತದೆ, ರಾತ್ರಿ ಒಂದು ಗಂಟೆಯಲ್ಲಿ ಅವರ ಅಣ್ಣ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದು ಎಲ್ಲರೂ ಟ್ರೋಲ್ ಮಾಡುತ್ತಿರುವಂತೆ ಬಿರಿಯಾನಿ ಮಾಡಲು ಅಲ್ಲಾ.. ಬದಲಾಗಿ ಮಾರ್ಕೆಟಿನಿಂದ ಕೊತ್ತಂಬರಿ ಸೊಪ್ಪು ತಂದು ಅಂಗಡಿಗಳಿಗೆ ಹಾಕುವುದು ಅವರಣ್ಣ ಮಾಡುವ ಕೆಲಸ.ಆದರೆ ನ್ಯೂಸ್ ಚಾನೆಲ್ ಒಂದರಲ್ಲಿದರಲ್ಲಿ ಬಂದ ಕ್ಲಿಪ್ಪಿಂಗಿನಲ್ಲಿ ಬೇಕೆಂದೆ ‘ಅಂಗಡಿ’ ಎಂಬ ಪದವನ್ನು ಎಡಿಟ್ ಮಾಡಲಾಗಿದೆ. ಟ್ರೋಲ್ ಪೇಜ್ಗಳಲ್ಲಿ ಬರುತ್ತಿರುವ ಅದೇ ವೀಡಿಯೋದಲ್ಲಿ ‘ಅಂಗಡಿ’ ಎಂಬ ಪದ ಈಗಲೂ ಇದೆ. ಬೇಕಾದರೆ ಕೇಳಿ ಖಚಿತಪಡಿಸಿಕೊಳ್ಳಿ.
ಸ್ವಲ್ಪವಾದರೂ ಬೆಂಗಳೂರಿನ ದಿನನಿತ್ಯದ ವ್ಯವಹಾರದ ಆಗುಹೋಗುಗಳ ಪರಿಚಯವಿದ್ದರೆ ಆ ಹೆಂಗಸಿನ ಭಾಷಾಪ್ರಯೋಗದ ಹೊರತಾಗಿ ಆಕೆ ಕೊತ್ತಂಬರಿ ಸೊಪ್ಪಿನ ವಿಚಾರದಲ್ಲಿ ಹೇಳ ಹೊರಟಿರುವುದರಲ್ಲಿ ಏನೂ ತಪ್ಪಿಲ್ಲ ಅನ್ನುವುದು ತಿಳಿಯುತ್ತದೆ. ನಮ್ಮ ನಿಮ್ಮಂತೆ ಕೆಲವು ಶ್ರಮಜೀವಿ ವರ್ಗಕ್ಕೆ ಹಗಲು ಕೆಲಸ , ರಾತ್ರಿ ನಿದ್ದೆ ಎನ್ನುವ ಸೌಭಾಗ್ಯದ ಬದುಕಿಲ್ಲ.
ಸೊಪ್ಪು ತರಕಾರಿ ಇನ್ನಿತರ ಸರಕು ಹೊತ್ತ ಲಾರಿಗಳು ಬೆಂಗಳೂರು ಪ್ರವೇಶಿಸುವುದೇ ನಡುರಾತ್ರಿ ಮೀರಿದ ಮೇಲೆಯೇ . ನಾವೆಲ್ಲಾ ಗಡದ್ದಾಗಿ ತಿಂದು ಮಲಗಿದ್ದಾಗ ಮಾರುಕಟ್ಟೆಗಳಿಂದ ಸಾಮಗ್ರಿಗಳನ್ನು ಅಂಗಡಿಗಳಿಗೆ ಸಪ್ಲೈ ಮಾಡುವವರು ಮಾರುಕಟ್ಟೆಗೆ ಹೋಗಿ ಸಾಮಗ್ರಿಗಳನ್ನು ಗಾಡಿಗಳಲ್ಲಿ ಹೇರಿಕೊಂಡು ತಂದು ಬೆಳಗಾಗುವುದರೊಳಗೆ ನಮ್ಮ ಅಕ್ಕಪಕ್ಕದ ಅಂಗಡಿಗಳಿಗೆ ತಲುಪಿಸಿದಾಗಲೇ ಬೆಳಿಗ್ಗೆ ವಾಕಿಂಗ್ ಹೋದ ತಾಯಂದಿರು ಫ್ರೆಶ್ ಆಗಿರೋ ಕೊತ್ತಂಬರಿ ಸೊಪ್ಪು ತಂದು ಸಾರು, ಸಾಂಬಾರು ,ಚಟ್ನಿ , ಪಲ್ಯಗಳನ್ನು ರುಚಿಯಾಗಿ ಮಾಡಿ ನಮ್ಮ ಹೊಟ್ಟೆ ತುಂಬಿಸಲು ಸಾಧ್ಯವಾಗುವುದು .
ಯಾರಿಗೆ ಗೊತ್ತು ನಾವಿಂದು ಗೇಲಿ ಮಾಡುತ್ತಿರುವ ಆ ವ್ಯಕ್ತಿ ತಂದ ಕೊತ್ತಂಬರಿ ಸೊಪ್ಪೇ ರುಚಿಯಾಗಿ ನಮ್ಮಲ್ಲಿ ಕೆಲವರ ಹೊಟ್ಟೆ ಸೇರಿರಬಹುದು. ನಾವು ತಿನ್ನುವ ಪ್ರತಿ ಆಹಾರದ ಹಿಂದೆ ಬೆವರು ಸುರಿಸಿ ಬೆಳೆದ ರೈತ, ನಡುರಾತ್ರಿ ಎದ್ದು ಹೋಗಿ ಹೊತ್ತುಕೊಂಡೋ , ಗಾಡಿಗಳಲ್ಲಿ ಹಾಕಿ ತಳ್ಳಿಕೊಂಡೋ ತಂದು ನಮ್ಮ ತನಕ ತಲುಪಿಸಿದ ಇಂತಹ ಶ್ರಮಜೀವಿಗಳ ಋಣವಿದೆ. ಹೋಗಲಿ ಅವರೇನು ಪುಕ್ಕಟೆ ಕೊಡುತ್ತಾರ ? ನಾವು ಹಣ ಕೊಟ್ಟು ಕೊಂಡು ಕೊಂಡರೆ ತಾನೇ ಅವರ ಹೊಟ್ಟೆ ತುಂಬುವುದು ಅಂತಾ ಪ್ರಾಕ್ಟಿಕಲ್ ಆಗಿ ಯೋಚಿಸಿದರೂ ಪರವಾಗಿಲ್ಲ. ಆ ಹೆಂಗಸಿನ ಮಾತನ್ನು ಪೂರ್ತಿಯಾಗಿ ಕೇಳಿ , ನೋಡಿ ಅರ್ಥೈಸಿಕೊಳ್ಳಿ, ಯಾರೋ ಅರೆಬರೆ ಕೇಳಿದವರು ಹೇಳಿದರೆಂದೋ, ಪೂರ್ವಾಗ್ರಹ ಪೀಡಿತ ಮನಸ್ಥಿತಿಯವರು ಫಾರ್ವರ್ಡ್ ಮಾಡಿದರೆಂದೋ ನೀವು ಆ ಬಡ ಹೆಣ್ಣುಮಗಳ ಮಾತನ್ನು ಈ ಪರಿ ಗೇಲಿ ಮಾಡಬೇಡಿ. ಅದರಲ್ಲೂ ಮಾಹಿತಿ ಕೊರತೆಯಿಂದಲೋ ಅಥವಾ ಸುಮ್ಮನೆ ನಮ್ಮದೂ ಒಂದಿರಲಿ ಅಂತಲೋ ನಾನು ಸೆನ್ಸಿಬಲ್ ಅಂತ ಅಂದುಕೊಂಡಿರುವ ಕೆಲವರು ಕೂಡಾ ಇದೇ ಕೆಲಸದಲ್ಲಿ ತೊಡಗಿರುವುದು ಕಂಡು ಅಚ್ಚರಿ ಆಯಿತು.
ನಾಳೆ ನಮ್ಮ ನಿಮ್ಮ ತಾಯಂದಿರು ಮೈಕ್ ಮುಂದೆ ಮಾತಾಡಿದರು ಇಂತಹ ಟ್ರೋಲಿಗೆ ಆಹಾರ ಆಗುವ ವಸ್ತುಗಳನ್ನು ಹುಡುಕುವುದು ದೊಡ್ಡ ಕೆಲಸವಲ್ಲ. ‘ಕೊತ್ತಂಬರಿ ಸೊಪ್ಪು’ ಅಂತ ಬಿಡಿಸಿ ಆಡು ಮಾತಿನಲ್ಲಿ ಹೇಳುವವರು ತೀರಾ ವಿರಳ. ಸಾಮಾನ್ಯ ಜನರ ಆಡುಭಾಷೆಯಲ್ಲಿ ಅದು ಕೊತ್ತಂಬ್ರಿ,ಕೊತ್ತುಮ್ರೀ, ಕೊತ್ಮಿರಿ ಹೀಗೆಲ್ಲಾ ಎಲ್ಲವೂ ಬಳಕೆಯಲ್ಲಿದೆ.
ಹಿಂದೂ, ಮುಸ್ಲಿಂ, ಕ್ರೈಸ್ತ ಅಥವಾ ಇನ್ನಾವುದೇ ಧರ್ಮದ ಅಕ್ಕ ತಂಗಿ ತಾಯಂದಿರೆಲ್ಲ ಒಂದೇ. ಕೊನೆಕ್ಷಣದವರೆಗೂ ತಮ್ಮ ಅಣ್ಣ, ತಮ್ಮ,ಮಗ ತಪ್ಪಿತಸ್ಥ ಎಂದು ಅವರ ಮನಸ್ಸು ಒಪ್ಪುವುದಿಲ್ಲ. ಅದರಲ್ಲೂ ತಮ್ಮವರು ಸಂಕಷ್ಟಕ್ಕೆ ಸಿಲುಕಿದಾಗ ಆ ಮನಸ್ಸು ವಿಲವಿಲ ಒದ್ದಾಡುತ್ತೆ. ಇಡೀ ಜಗತ್ತೇ ಮಗನ/ಮಗಳ/ ಅಣ್ಣತಮ್ಮಂದಿರ ವಿರುದ್ಧ ನಿಂತರೂ ತಾಯಿ/ ಅಕ್ಕತಂಗಿಯರು ಆದಷ್ಟು ತಮ್ಮವರ ಪರ ನಿಲ್ಲಲು ಹೆಣಗುತ್ತಾರೆ. ಇದೀಗ ಕೊತ್ತಂಬರಿ ಸೊಪ್ಪಿನ ವಿಚಾರದಲ್ಲಿ ಮಾತಾಡಿದ ಹೆಂಗಸಿನ ಸ್ಥಿತಿಯು ಅಷ್ಟೇ.
ಹಾಗಂತ ಖಂಡಿತಾ ಅವರ ಅಣ್ಣ ಅಮಾಯಕ ಎನ್ನುವ ಮಾತು ಒಪ್ಪಲಾಗದು. ಪೊಲೀಸ್ ಸ್ಟೇಶನಿಗೆ ಬೆಂಕಿ ಹಚ್ಚಿದವರ ಮೇಲೆ ಕಿಂಚಿತ್ತೂ ಕರುಣೆ ತೋರದೆ ಕಠಿಣಾತೀಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಈ ಹಿಂದೆ ಪೋಸ್ಟ್ ಹಾಕಿದ್ದೇನೆ. ( ಮತ್ತೆ ಅದೇ ವಿಚಾರ ಪ್ರಸ್ತಾಪಿಸಬೇಡಿ..ಈ ಪೋಸ್ಟಲ್ಲಿ ನಾನು ಮಾತಾಡುತ್ತಿರುವುದು ಆ ಹೆಂಗಸಿನ ಮಾತುಗಳ ಮೇಲೆ ನಡೆಯುತ್ತಿರುವ ಗೇಲಿಯ ಬಗ್ಗೆ ಮಾತ್ರ )
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮಟ್ಟಿನ ಗಲಭೆ ಸರಿರಾತ್ರಿಯಲ್ಲಿ ನಡೆಯುತ್ತಿದ್ದಾಗ ಅಲ್ಲಿದ್ದ ಅವರ ಅಣ್ಣ ಅದನ್ನು ಬರೀ ನೋಡುತ್ತ ನಿಂತಿದ್ದ ಅಂದರೆ ನಂಬಲಾಗದು. ಅಷ್ಟು ಅಮಾಯಕನಾದರೆ ಅವನೇನು ಅಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ನಿಂತಿದ್ದನೇ ?
ಖಂಡಿತಾ ಅವನನ್ನು ಹುಡುಕಿಕೊಂಡು ಹೋಗಿ ಬಂಧಿಸಿದ್ದಾರೆ ಎಂದರೆ ಪೊಲೀಸರಿಗೆ ಏನೋ ಒಂದು ಕುರುಹು ಸಿಕ್ಕೇ ಇರುತ್ತದೆ. ಸಾಕ್ಷಿ ಇದ್ದರೆ ಶಿಕ್ಷೆ ಆಗುತ್ತದೆ . ಇಲ್ಲವಾದರೆ ವಿಚಾರಣೆ ನಡೆಸಿ ಬಿಟ್ಟು ಕಳಿಸುತ್ತಾರೆ.
Basically ಟ್ರೋಲ್ ಎನ್ನುವುದೇ ಇನ್ನೊಬ್ಬರನ್ನು ಗೇಲಿ ಮಾಡಿ ನಾವು ಸಂತೋಷ ಪಡುವ ಅನಾರೋಗ್ಯಕರ ಮನಸ್ಥಿತಿ. ಅದರಲ್ಲೂ ಟ್ರೋಲ್ ಮೂಲಕ ಆಡಳಿತದ ಕಿವಿ ಹಿಂಡಿದರೆ, ಬಲಾಢ್ಯರ ತಪ್ಪುಗಳನ್ನು ಎತ್ತಿ ತೋರಿಸಿದರೆ, ಸುಳ್ಳನ್ನೇ ಬಂಡವಾಳ ಮಾಡಿಕೊಂಡವರ ಕಾಲೆಳೆದರೆ ,ಸಮಾಜದ ಒಳಿತಿಗಾಗಿ ಉಪಯೋಗಿಸಿದರೆ ಟ್ರೋಲ್ ಅನ್ನು ಒಂದು ಮಟ್ಟಕ್ಕೆ ಸಮರ್ಥಿಸಬಹುದು. ಅದನ್ನು ಬಿಟ್ಟು ಬಡವರ, ಅಮಾಯಕರ , ಅನಕ್ಷರಸ್ಥರ, ಅಸಹಾಯಕರ ಪರಿಸ್ಥಿತಿಗಳನ್ನು ಗೇಲಿ ಮಾಡಲು, ಟ್ರೋಲ್ ಮಾಡಲು ಬಳಸದಿರೋಣ.
ಹೀಗೆ ಬರೆಯುವ ಮೂಲಕ ಕವಿರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.