Political News: ಸಚಿವ ಪ್ರಿಯಾಂಕ್ ಖರ್ಗೆ ಅವರು ದೇಶದಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಎಂದು ಆಗಾಗ ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚಿಗೆ ಈ ಹೇಳಿಕೆ ಮತ್ತೆ ನೀಡಿದ್ದು, ಬಿಜೆಪಿ ಶಾಸಕ ಸುನೀಲ್ ಕುಮಾರ್ ಈ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಹೌದು. ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅದನ್ನು ನಿಗ್ರಹಿಸುವ ಅಧಿಕಾರ ಸಂವಿಧಾನ ಬದ್ಧವಾಗಿ ದತ್ತವಾಗಿದೆ ! ರಾಜ್ಯಾಡಳಿತ ನಡೆಸುವಂತೆ ಸಿಕ್ಕ ಜನಾದೇಶವನ್ನು ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ವಿಭಜಕ, ದ್ವೇಷ, ಕೋಮು ಸಂಘರ್ಷ, ಮನುಷ್ಯ ಮನುಷ್ಯರ ನಡುವೆ ವೈಶಮ್ಯದ ಬೀಜ ಬಿತ್ತುತ್ತಿರುವ ಈ ಸಚಿವ ಕರ್ನಾಟಕ ರಾಜ್ಯದ ಅತಿದೊಡ್ಡ ವಿಭಜಕ ಶಕ್ತಿ ಎಂದು ಸುನೀಲ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
RSS ಶತಮಾನೋತ್ಸವ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ ಸಂಘದ ಚಟುವಟಿಕೆ ಹಾಗೂ ಬೈಠಕ್ ನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕೆಂಬ ಪ್ರಸ್ತಾಪವನ್ನು ಸಚಿವ ಪ್ರಿಯಾಂಕ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ. ಇದರ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದ್ದಾರೆ.
ನೋಡಿಯೇ ಬಿಡೋಣ. ನಿಮಗೆ ನಿಜಕ್ಕೂ ತಾಕತ್ತಿದ್ದರೆ ಸಂಘದ ಚಟುವಟಿಕೆಯನ್ನು ಬ್ಯಾನ್ ಮಾಡುವ ಸಾಹಸಕ್ಕೆ ಕೈ ಹಾಕಿ. ಸದಾ ರಾಷ್ಟ್ರ ಹಿತ, ರಾಷ್ಟ್ರೀಯ ಹಿತಾಸಕ್ತಿ, ಸಾಮಾಜಿಕ ಚಟುವಟಿಕೆ, ಸಾಂಸ್ಕ್ರತಿಕ ಪರಿಚರ್ಯ, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುತ್ತಲೇ ಬಂದಿರುವ ಸಂಘ ಕಾಯಾ,ವಾಚಾ, ಮನಸಾ ವಿಭಜಕ ವಿಚಾರಗಳನ್ನು ಪ್ರತಿಪಾದಿಸಿಲ್ಲ.
ಆದರೆ ಜಾತಿ, ಧರ್ಮ, ಪ್ರದೇಶದ ಆಧಾರದ ಮೇಲೆ ಸಮಾಜವನ್ನು ಛಿದ್ರ ಛಿದ್ರಗೊಳಿಸುತ್ತಿರುವ ಹಿಂಜಿ ಹಿಂಜಿ ನೋಯಿಸುತ್ತಿರುವ ಕಾಂಗ್ರೆಸ್ ಗೆ ಹಾಗೂ ಅದರ ಭ್ರಷ್ಟ, ಧರ್ಮಲಂಡ ನಾಯಕರಿಗೆ ಆರ್ ಎಸ್ ಎಸ್ ಸದಾ ಸಿಂಹ ಸ್ವಪ್ನ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಜಾತ್ಯತೀತತೆಯ ಹೆಸರಿನಲ್ಲಿ ಕಾಂಗ್ರೆಸ್ ನಡೆಸಿದ ದೇಶ ವಿಭಜನೆ, ರಾಷ್ಟ್ರೀಯ ಹಿತಾಸಕ್ತಿಯ ದ್ರೋಹ, ಅಧಿಕಾರ ದಾಹ, ಸಮಾಜ ವಿಭಜನೆಯನ್ನು ಪ್ರತಿ ಹಂತದಲ್ಲೂ RSS ಬಯಲು ಮಾಡಿದ್ದೇ ಸಂಘದ ವಿರುದ್ಧ ಕಾಂಗ್ರೆಸ್ ನಾಯಕರು ದ್ವೇಷ ಕಕ್ಕುವುದಕ್ಕೆ ಕಾರಣವಾಗಿದೆ.
ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲೇ ಆರ್ ಎಸ್ ಎಸ್ ಕಾಂಗ್ರೆಸ್ ಹಾಗೂ ನಕಲಿ ಜಾತ್ಯತೀತ ಶಕ್ತಿಗಳ ಎದೆಯಲ್ಲಿ ನಡುಕ ಹುಟ್ಟಿಸಿತ್ತು. ಇದರ ಫಲವಾಗಿ ಎರಡು ಬಾರಿ ಆರ್ ಎಸ್ ಎಸ್ ಬ್ಯಾನ್ ಮಾಡುವ ವಿಫಲ ಯತ್ನವನ್ನು ಕಾಂಗ್ರೆಸ್ ನಡೆಸಿತ್ತು ಎಂದು ಸುನೀಲ್ ವ್ಯಂಗ್ಯವಾಡಿದ್ದಾರೆ.
ಆದರೆ ನ್ಯಾಯಲಯ ಕಾಂಗ್ರೆಸಿಗರ ಈ ವಿಫಲ, ಅಸಹ್ಯ, ಸಂವಿಧಾನ ವಿರೋಧಿ, ಅಪ್ರಜಾಸತಾತ್ಮಕ ಕೃತ್ಯಕ್ಕೆ ಮನ್ನಣೆ ನೀಡಲಿಲ್ಲ. ಆರ್ ಎಸ್ ಎಸ್ ನ್ನು ಬ್ಯಾನ್ ಮಾಡುವ ಪ್ರಯತ್ನ, ದಬ್ಬಾಳಿಕೆ, ಶೋಷಣೆ ಹಂತಹಂತವಾಗಿ ವಿಫಲವಾಯ್ತು. ಈಗ ಅದೇ ಧೂರ್ತ ನಡೆಯನ್ನು ಈ ಹತಾಷ ಸಚಿವ ಪ್ರಿಯಾಂಕ ಖರ್ಗೆ ಪ್ರಸ್ತಾಪಿಸಿದ್ದಾರೆ.
ನೂರು ವರ್ಷಗಳ ಕಾಲ ಇಂಥ ಮನಸ್ಥಿತಿಯ ಎದುರಿಸಿ ಬೆಳೆದ ಸಂಘಕ್ಕೆ ಇಂಥ ಘಜನಿ, ಘೋರಿ, ಔರಂಗಜೇಬ್ ಗಳಿಗೆ ಎದೆಕೊಟ್ಟು ನಿಲ್ಲುವುದಕ್ಕೆ ಯಾವ ಭಯವೂ ಇಲ್ಲ. ನಮಸ್ತೇ ಸದಾ ವತ್ಸಲೆ ಮಾತೃ ಭೂಮೇ…ಸಂಘ, ಸಂಘದ ಪ್ರಾರ್ಥನಾ ಗೀತೆ, ಸಂಘದ ಧ್ಯೇಯ ನಮ್ಮ ಉಸಿರು. ಇದನ್ನು ಇನ್ನಷ್ಟು ತಾರಕ ಸ್ವರದಲ್ಲಿ ಮೊಳಗಿಸುತ್ತೇವೆ ಎಂದು ಸುನೀಲ್ ಸಚಿವ ಪ್ರಿಯಾಂಕ್‌ಗೆ ಟಾಂಗ್ ನೀಡಿದ್ದಾರೆ.
ಪ್ರಿಯಾಂಕ ಖರ್ಗೆಯವರೇ ಬಾಗಿಲು ಬಡಿದು ಬೆಕ್ಕು ಹೆದರಿಸುವುದು ಬೇಡ. ದೇಶದ ಸಂವಿಧಾನವನ್ನು ಬಚ್ಚಲ ಮನೆಯಲ್ಲಿ ಬಿಸಾಡಿ ತುರ್ತು ಪರಿಸ್ಥಿತಿ ಹೇರಿದ ಸರ್ವಧಿಕಾರಿ ಇಂದಿರಾ ಗಾಂಧಿಯವರನ್ನೇ ಮಂಡಿಯೂರಿಸಿದ್ದೇವೆ. ಬಾಗಿಸುತ್ತೇನೆಂದು ಬೀಗಬೇಡಿ. ಬಾಗಿದ ಬಿಲ್ಲೇ ನಿಮ್ಮ ಸೊಕ್ಕು ಮುರಿಯುತ್ತದೆ ಎಂದು ಶಾಸಕ ಸುನೀಲ್ ಕುಮಾರ್ ಸಚಿವ ಪ್ರಿಯಾಂಕ್ ಖರ್ಗೆಗೆ ಎಚ್ಚರಿಕೆ ನೀಡಿದ್ದಾರೆ.