Monday, October 13, 2025

Latest Posts

ಡಿಸೆಂಬರ್‌ನಲ್ಲಿ ಸಂಪುಟ ಪುನರಚನೆಯಾಗಲಿದೆ : ಯಾರು ಇನ್, ಯಾರು ಔಟ್?

- Advertisement -

ಸಿದ್ದರಾಮಯ್ಯ ಹಾಗು ರಾಹುಲ್ ಗಾಂಧಿ ಭೇಟಿಯಾದ ನಂತರ ಇಬ್ಬರ ನಡುವೆ ಏನೆಲ್ಲಾ ಮಾತುಕತೆ ಆಯಿತು ಅನ್ನೋ ಚರ್ಚೆ ಜೋರಾಗಿ ನಡೆದಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಈಗ ’12 ಹೊರಗೆ, 12 ಒಳಗೆ’ ಎಂಬ ಮಾತು ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಂತ್ರಿಮಂಡಲ ಪುನಾರಚನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರಿಗೆ ತಮ್ಮ ಸಂಪೂರ್ಣ ಮನದಿಂಗಿತವನ್ನು ಹಂಚಿಕೊಂಡಿದ್ದಾರೆ.

ಹೀಗಾಗಿ ಈಗಾಗಲೇ ಸಿದ್ದರಾಮಯ್ಯ ಅವರ ಕೈಯಲ್ಲಿ, ಹೊರಗೆ ಹೋಗಬೇಕಾದ 12 ಮಂದಿ ಹಾಗೂ ಹೊಸದಾಗಿ ಸೇರ್ಪಡೆಯಾಗುವ 12 ಮಂದಿಯ ಪಟ್ಟಿಯು ತಯಾರಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಈ ಪಟ್ಟಿಯಲ್ಲಿ ಕೇವಲ ಸಿದ್ದರಾಮಯ್ಯ ವಿರೋಧಿಗಳಷ್ಟೇ ಅಲ್ಲ, ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಆಪ್ತರಾದ ಕೆಲ ಸಚಿವರೂ ಇದ್ದಾರೆ ಎಂಬುದು ಕುತೂಹಲದ ಸಂಗತಿ.

ಮೂಲಗಳ ಪ್ರಕಾರ, ಈ ಸಚಿವರಲ್ಲಿ ಒಬ್ಬರು ತಮ್ಮ ಖಾತೆಯ ಪ್ರಮುಖ ನಿರ್ಧಾರಗಳನ್ನು ನೇರವಾಗಿ ಸುರ್ಜೇವಾಲಾ ಅವರ ಸಲಹೆಯ ಮೇರೆಗೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ, ರಾಜ್ಯದ ಹಿತಕ್ಕಿಂತ ಪರರಾಜ್ಯದ ರಾಜಕೀಯ ಅಂಕಗಣಿತಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ ಎಂಬ ಅಭಿಪ್ರಾಯವು ಸಿದ್ದರಾಮಯ್ಯ ಶಿಬಿರದಲ್ಲಿ ಬಲ ಪಡೆದಿದೆ.

ಇಂಥ ಪರಿಸ್ಥಿತಿಯಲ್ಲಿ, ಅಧಿಕಾರಶಾಹಿಯ ಕಪಿಮುಷ್ಟಿಯಲ್ಲಿ ಸಿಲುಕಿರುವ ಮತ್ತು ಸ್ವತಂತ್ರ ದೃಷ್ಟಿಕೋನ ಕಳೆದುಕೊಂಡಿರುವ ಕೆಲ ಸಚಿವರಿಗೆ ‘ಗೇಟ್‌ಪಾಸ್’ ನೀಡಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಭವಿಷ್ಯದಲ್ಲಿ ಸರಕಾರಕ್ಕೆ ಬಲ ತುಂಬಿ, ಅದರ ಇಮೇಜ್ ಹೆಚ್ಚಿಸಬಲ್ಲಂಥವರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಲು ಬಯಸಿದ್ದಾರೆ.

ಈ ಪ್ರಸ್ತಾಪಕ್ಕೆ ರಾಹುಲ್ ಗಾಂಧಿ ಸಹ ಗ್ರೀನ್ ಸಿಗ್ನಲ್ ಕೊಟ್ಟಿರೊದಾಗಿ ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರಿಡುತ್ತಿರುವ ಈ ಹೆಜ್ಜೆಗೆ ‘ಯಸ್’ ಅನ್ನದೆ ವರಿಷ್ಠರಿಗೂ ಬೇರೆ ದಾರಿ ಇಲ್ಲ. ಈ ಬದಲಾವಣೆಯಿಂದ ಅಸಮಾಧಾನ ಉಂಟಾದರೆ 2028ರೊಳಗೆ ಸರಕಾರವೇ ಕುಸಿಯುವ ಅಪಾಯವಿದೆ. 2029ರ ರ ಸಂಸತ್ ಚುನಾವಣೆಗೆ ಹೋಗುವ ಮುನ್ನ ಕರ್ನಾಟಕ ಎಂಬ ಸೇನಾನೆಲೆಯನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಅದರ ಮುಂದಿದೆ.

ಹೀಗಿರುವಾಗ ಯಾವುದೋ ಒತ್ತಡಕ್ಕೆ ಸಿಲುಕಿ ದುಡುಕಿದರೆ 2028 ಕ್ಕೂ ಮುನ್ನವೇ ಸರಕಾರ ಪತನವಾದರೆ ಗತಿ ಏನು? ಎಂಬುದು ರಾಹುಲ್ ಯೋಚನೆಯಾಗಿದೆ. ಹೀಗಾಗಿ, ಮೂಲಗಳ ಪ್ರಕಾರ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಗಳ ಬಳಿಕ, ಅಂದರೆ ಡಿಸೆಂಬರ್ ವೇಳೆಗೆ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss