Monday, October 13, 2025

Latest Posts

ಬ್ಯಾಂಕ್‌ ದರೋಡೆಗೈದ ಪ್ರಾಧ್ಯಪಕ – ಈತ ಬಲೆಗೆ ಬಿದ್ದಿದ್ದೇ ರೋಚಕ!

- Advertisement -

ಜೀವನದಲ್ಲಿ ನಡೆದ ಘಟನೆಗಳ ಆಧಾರದ ಮೇಲೆ ಸಿನಿಮಾ ಮಾಡೋದು ಸಾಮಾನ್ಯ. ಆದರೆ, ಕೆಲವರ ಜೀವನವೇ ನಿಜ ಜೀವನದ ಚಿತ್ರಕಥೆ ಆಗಿಬಿಟ್ಟರೆ? ಅಚ್ಚರಿಯೇನಿಲ್ಲ, ಬಿಹಾರದ ಮೂಲದ ರಸಾಯನಶಾಸ್ತ್ರ ಪ್ರಾಧ್ಯಾಪಕನೊಬ್ಬನ ಬದುಕು ಇದೇ ರೀತಿ ಸಿನಿಮಾ ಕಥೆಯನ್ನು ಹೋಲುತ್ತದೆ. ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ವಿದ್ಯಾವಂತನಾಗಿದ್ದರೂ ಅಪರಾಧದ ದಾರಿ ಹಿಡಿದು, ಈಗ ಪೊಲೀಸರ ಅತಿಥಿಯಾಗಿರುವ ಈ ವ್ಯಕ್ತಿಯ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

2017 ಮತ್ತು 2021ರಲ್ಲಿ ದೆಹಲಿ ಹಾಗೂ ಬಿಹಾರದಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ 32 ವರ್ಷದ ದೀಪ್ ಶುಭಂ, ಇತ್ತೀಚೆಗೆ ಹರಿಯಾಣದ ಸೋಹ್ನಾ ಪ್ರದೇಶದಲ್ಲಿ ಪತ್ತೆಯಾದ. ತಂತ್ರಜ್ಞಾನ ಮತ್ತು ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪೊಲೀಸರು ಬಂಧಿಸಿದ ದೀಪ್ ಶುಭಂ, ಸೀತಾಮರ್ಹಿ ಜಿಲ್ಲೆಯವನು. ಆತ ದೆಹಲಿಯ ಪ್ರತಿಷ್ಠಿತ ಕಾಲೇಜೊಂದರಿಂದ ರಸಾಯನಶಾಸ್ತ್ರದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದ.

ನಂತರ ಎಂ.ಫಿಲ್ ಮುಗಿಸಿ ಕಾನೂನು ಓದಲು ತೀರ್ಮಾನಿಸಿ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲೂ ಉತ್ತೀರ್ಣನಾಗಿದ್ದ. ಆದರೆ, ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಎಲ್ಎಲ್‌ಬಿ ಮಧ್ಯದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಹಣಕಾಸಿನ ಕೊರತೆ ಅವನನ್ನು ತಪ್ಪು ದಾರಿಯತ್ತ ಕೊಂಡೊಯ್ದಿತು ಎಂದು ಆತ ತನಿಖೆಯಲ್ಲಿ ಹೇಳಿಕೊಂಡಿದ್ದಾನೆ.

2017ರಲ್ಲಿ ಪಟಾಕಿ, ಮೈಥೆಲ್ ಅಸಿಟೇಟ್ ಹಾಗೂ ಬೆಂಜಿನ್ ಬಳಸಿ ಸ್ಮೋಕ್ ಬಾಂಬ್ ತಯಾರಿಸಿ ಬ್ಯಾಂಕ್ ದರೋಡೆ ನಡೆಸಿದ ದೀಪ್ ಶುಭಂ, ಬಿಹಾರದ ಸೀತಾಮರ್ಹಿಯ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 3.6 ಲಕ್ಷ ರೂ. ದೋಚಿದ. ಜೈಲು ಶಿಕ್ಷೆಯ ನಂತರ ಆತ ಬದುಕನ್ನು ಬದಲಿಸಿಕೊಳ್ಳುವ ಬದಲು ಮತ್ತೆ ಅಪರಾಧದ ಮಾರ್ಗ ಹಿಡಿದ. 2021ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸಹ ಅಪರಾಧಿ ರಿತೇಶ್ ಠಾಕೂರ್ ಜೊತೆ ಸೇರಿ ದೆಹಲಿಯ ಎರಡು ಬ್ಯಾಂಕ್‌ಗಳಲ್ಲಿ ದರೋಡೆ ನಡೆಸಿದ. ಅಲ್ಲದೇ ಗುಜ್ರಾನ್‌ವಾಲಾದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ದೋಚಿದ ಪ್ರಕರಣದಲ್ಲೂ ಅವನ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss