Thursday, October 16, 2025

Latest Posts

ಸಮೀಕ್ಷೆಗೆ ತೆರಳಿ ಶಿಕ್ಷಕಿ ನಾಪತ್ತೆ : ಕೋಲಾರದಲ್ಲಿ ಶವವಾಗಿ ಪತ್ತೆ !

- Advertisement -

ಜಾತಿ ಗಣತಿ ಸಮೀಕ್ಷೆ ಕಾರ್ಯಕ್ಕೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿಯೊಬ್ಬರ ಶವ ಪತ್ತೆಯಾದ ಘಟನೆ ಕೋಲಾರದಲ್ಲಿ ಆತಂಕ ಮೂಡಿಸಿದೆ. ಮೃತರನ್ನು ಅಖ್ತರ್‌ ಬೇಗಂ ಎಂದು ಗುರುತಿಸಲಾಗಿದ್ದು, ಅವರು ಕೋಲಾರ ತಾಲೂಕಿನ ಬಿ.ಹೊಸಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರು. ನಾಪತ್ತೆಯಾಗಿ ಎರಡು ದಿನಗಳ ಬಳಿಕ, ಕೆಜಿಎಫ್‌ ತಾಲೂಕಿನ ಐಪಳ್ಳಿ ಕೆರೆಯಲ್ಲಿ ಅವರ ಶವ ಪತ್ತೆಯಾಗಿದೆ. ಈ ಘಟನೆ ಕೊಲೆಯೋ ಅಥವಾ ಆತ್ಮಹತೆಯೋ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಕೋಲಾರದ ಮಹಾಲಕ್ಷ್ಮಿ ಬಡವಾಣೆಯ ನಿವಾಸಿಯಾಗಿದ್ದ ಅಖ್ತರ್‌ ಬೇಗಂ, ನರಸಾಪುರದಲ್ಲಿ ಜಾತಿ ಗಣತಿ ಸಮೀಕ್ಷೆ ಕಾರ್ಯ ನಿರ್ವಹಿಸಿದ ಬಳಿಕ ಕಾಣೆಯಾಗಿದ್ದರು. ಹುಡುಕಾಟ ನಡೆಸಿದರೂ ಎರಡು ದಿನಗಳ ಕಾಲ ಅವರ ಯಾವುದೇ ಸುಳಿವು ದೊರಕದ ಹಿನ್ನೆಲೆಯಲ್ಲಿ, ಕೋಲಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸಮೀಕ್ಷೆ ಕಾರ್ಯವನ್ನು ಸಮಯಕ್ಕೆ ಪೂರ್ಣಗೊಳಿಸಬೇಕೆಂಬ ಒತ್ತಡದಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆಂಬ ಶಂಕೆ ವ್ಯಕ್ತವಾಗಿದೆ. ಅವರ ಸಾವಿನ ನಿಜಸ್ವರೂಪ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆ ಅಥವಾ ಆತ್ಮಹತ್ಯೆ ಎನ್ನುವುದನ್ನು ದೃಢಪಡಿಸಲು ತನಿಖೆ ಮುಂದುವರಿದಿದೆ. ಘಟನೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಇತರೆ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಸುರಕ್ಷತಾ ಕ್ರಮಗಳು ಸಾಕಷ್ಟಿಲ್ಲ ಎಂಬ ಪ್ರಶ್ನೆಯೂ ಇದೀಗ ಎದ್ದಿದ್ದು, ಶಿಕ್ಷಕರ ಸುರಕ್ಷತೆಯ ಕುರಿತಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಜೋರಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss