Friday, October 17, 2025

Latest Posts

ಕತ್ತೆಗೆ ವಯಸ್ಸಾದರೂ ಬುದ್ಧಿ ಬರಲ್ಲ.. ಖರ್ಗೆ, ಡಿಕೆಶಿಗೆ ಪ್ರಕಾಶ್ ರೈ ಮನವಿ !

- Advertisement -

ರಾಜಕಾರಣಿಗಳು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಬಗ್ಗೆ ಕೇವಲ ಭಾಷಣ ಮಾಡುವುದರಿಂದ ಪ್ರಯೋಜನ ಇಲ್ಲ. ಅವರ ತತ್ವಗಳನ್ನು ಪಾಲಿಸಬೇಕು, ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಮತ್ತು ಸದನದಲ್ಲಿ ಅವರ ಮಂತ್ರಗಳನ್ನು ಪಠಿಸುವಂತಿಲ್ಲ ಎಂದು ಹಿರಿಯ ನಟ ಪ್ರಕಾಶ್ ರೈ ಅಭಿಪ್ರಾಯ ವ್ಯಕ್ತಪಡಿಸಿದರು. ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ನಡೆದ ಬೌದ್ಧ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ನಡೆಸದಂತೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರಿಂದ ವಿವಾದ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯ ಬಿಜೆಪಿ, 2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದ ಆರ್‌ಎಸ್‌ಎಸ್ ಶಿಬಿರಕ್ಕೆ ಆಗಿನ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ್ದ ಫೋಟೋ ಹಂಚಿ, ನಿಮ್ಮ ತಂದೆಯವರನ್ನೂ ನಿಷೇಧಿಸುತ್ತೀರಾ? ಎಂದು ಪ್ರಶ್ನಿಸಿತ್ತು.

ಈ ಹಿನ್ನೆಲೆಯಲ್ಲಿಯೇ ಪ್ರಕಾಶ್ ರೈ ಅವರು ರಾಜಕಾರಣಿಗಳು ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಾರದು ಎಂದು ಹೇಳಿರುವುದು ಗಮನಾರ್ಹ. ಇತ್ತೀಚೆಗಷ್ಟೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್‌ಎಸ್ ಧ್ಯೇಯಗೀತೆಯಾದ ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಶ್ಲೋಕವನ್ನು ಹಾಡಿದ್ದರಿಂದ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದರು. ತಮ್ಮ ಭಾಷಣದಲ್ಲಿ ಪ್ರಕಾಶ್ ರೈ ಅವರು ಇಂತಹ ನಡೆಗಳು ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಕತ್ತೆಗೆ ವಯಸ್ಸಾದರೂ ಬುದ್ಧಿ ಬರುವುದಿಲ್ಲ ಎಂಬಂತೆ, ಒಂದು ಸಂಸ್ಥೆಗೆ 100 ವರ್ಷವಾದರೂ ವಿವೇಕ ಬರಲಿಲ್ಲ ಎಂದು ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರಿದರು. ಅವರ ಮಾತು ಹಿಂದೂ ಧರ್ಮದ ಪರ ಎಂದು ಹೇಳಿಕೊಳ್ಳುತ್ತಾರೆ, ಆದರೆ ಅವರದೇ ಧರ್ಮದ ಮೌಲ್ಯಗಳನ್ನು ಪಾಲಿಸುವವರಲ್ಲ. ಅವರ ಅಂಧ ಭಕ್ತನೊಬ್ಬ ಸಗಣಿ ರೀತಿಯ ಆಲ್‌ರೌಂಡರ್ ಇದ್ದಂತೆ. ಎಲ್ಲಿ ಯಾವ ಸಂದರ್ಭ ಇರುತ್ತದೋ ಹಾಗೆ ಬದಲಾಗುತ್ತಾರೆ. ಒಲೆಗೆ ಬಿದ್ದರೆ ಇಂಧನ, ಹೊಲಕ್ಕೆ ಬಿದ್ದರೆ ಗೊಬ್ಬರ, ತಲೆಗೆ ಬಿದ್ದರೆ ಅಂಧ ಭಕ್ತ ಎಂದರು.

ನೀವು ಎಲ್ಲವನ್ನೂ ತುಳಿಯಬಹುದು ಎಂದುಕೊಳ್ಳುತ್ತಿರುವುದು ಕೇವಲ ಶತಮಾನಕ್ಕೊಂದು ಆಟ. ಆದರೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳು ಶತಶತಮಾನಗಳಿಂದ ಜೀವಂತವಾಗಿವೆ. ಅವರ ಮುಂದೆ ನೀವು ನಿಲ್ಲಲಾರಿರಿ. ಅಸಮಾನತೆಯನ್ನು ಬೋಧಿಸುವ ನಿಮ್ಮ ನಿಲುವಿಗೆ ಧರ್ಮದೇಟು ಕೊಡಲೇಬೇಕು,” ಎಂದು ಪ್ರಕಾಶ್ ರೈ ಹೇಳಿದರು. ರಾಕ್ಷಸರ ಜಗತ್ತಿನಲ್ಲಿ ಕರುಣೆ ಮತ್ತು ಪ್ರೀತಿಯಿಂದ ಮಾತ್ರ ಗೆಲ್ಲಲಾಗುವುದಿಲ್ಲ. ಹೋರಾಟದ ಮೂಲಕವೇ ಬದಲಾವಣೆ ತರಬಹುದು. ಅದಕ್ಕಾಗಿ ನಾವು ಸಂಘಟಿತರಾಗಬೇಕು ಎಂದು ಅವರು ಒತ್ತಿಹೇಳಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss