ಬೆಂಗಳೂರು ನಗರವನ್ನು ಬೆಚ್ಚಿಬೀಳಿಸುವಂತ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಕತ್ತು ಕೂಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಲ್ಲೇಶ್ವರಂ ಮಂತ್ರಿ ಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ. 20 ವರ್ಷದ ಯಾಮಿನಿ ಪ್ರಿಯಾ ಎಂಬ ಯುವತಿ ಹತ್ಯೆಗೆ ಬಲಿಯಾದರು. ಪ್ರೀತಿಗೆ ಒಪ್ಪದ ಕಾರಣದಿಂದ ಈ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ವಿಘ್ನೇಶ್ ಎಂಬಾತನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಯಾಮಿನಿ ಪ್ರಿಯಾ ಬಿ.ಫಾರ್ಮ್ ಪದವಿಗಾಗಿ ವ್ಯಾಸಂಗ ಮಾಡುತ್ತಿದ್ದರು. ಬೆಳಗ್ಗೆ ಪರೀಕ್ಷೆ ಇದೆ ಎಂದು ಕಾಲೇಜಿಗೆ ತೆರಳಿದ್ದ ಪ್ರಿಯಾ, ಮಧ್ಯಾಹ್ನ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿ ಹಿಂಬದಿಯಿಂದ ಹತ್ತಿರ ಬಂದು ಮೊದಲು ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ಬಳಿಕ ಕುತ್ತಿಗೆ ಮತ್ತು ಮುಖದ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಶ್ರೀರಾಮಪುರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರೀತಿ ನಿರಾಕರಣೆಯೇ ಕೊಲೆಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ವಿದ್ಯಾರ್ಥಿನಿಯ ತಂದೆ ಗೋಪಾಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ಹಲವಾರು ತಿಂಗಳಿನಿಂದ ಆ ಯುವಕ ನನ್ನ ಮಗಳಿಗೆ ಹಿಂಸೆ ಕೊಡುತ್ತಿದ್ದ. ಹಿಂಬಾಲಿಸಿ ಪ್ರೀತಿ ಮಾಡು ಎಂದು ಒತ್ತಾಯಿಸುತ್ತಿದ್ದ. ಪೊಲೀಸ್ ಠಾಣೆಗೆ ದೂರು ನೀಡಿ ಆರು ತಿಂಗಳ ಹಿಂದೆ ಮುಚ್ಚಳಿಕೆ ಬರೆಸಿಕೊಂಡಿದ್ದೆವು. ನಂತರ ಶಾಂತವಾಗಿದೆ ಎಂದುಕೊಂಡಿದ್ದೆವು. ಆದರೆ ಇವತ್ತು ಈ ಘಟನೆ ನಡೆದಿದೆ. ಆ ಹುಡುಗ ಏರಿಯಾದಲ್ಲೇ ಸರಿ ಇರಲಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದು, ಶಂಕಿತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ