ಬಿಹಾರ ಚುನಾವಣೆಯ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಸಂಸದ ಬಿ.ವೈ. ರಾಘವೇಂದ್ರ ಮಾಡಿದ್ದಾರೆ. ಸಚಿವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಿಹಾರ ಚುನಾವಣೆಗೆ ನಿಧಿ ಸಂಗ್ರಹಣೆ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಕಣ್ಣೀರು ಹಾಕಿಕೊಂಡು ಈ ವಿಷಯವನ್ನು ತಮ್ಮ ಮುಂದೆಯೇ ತಿಳಿಸಿದ್ದಾರೆ ಎಂದು ರಾಘವೇಂದ್ರ ಹೇಳಿದರು. ವರ್ಗಾವಣೆ ದಂಧೆ ಮುಗಿದಿದ್ದು, ಈಗ ರಿನಿವಲ್ ಹೆಸರಿನಲ್ಲಿ ಎಲ್ಲ ಇಲಾಖೆಯ ಮಂತ್ರಿಗಳು ಹಣ ಸಂಗ್ರಹಿಸುತ್ತಿದ್ದಾರೆ ಎಂದು ಟೀಕಿಸಿದರು. ಈ ಹಣ ಬಿಹಾರಕ್ಕೆ ತಲುಪುವುದಿಲ್ಲ, ಅದು ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪುತ್ತದೆ ಎಂದು ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದರು.
ಇದಕ್ಕೆ ತಿರುಗೇಟು ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ, ರಾಘವೇಂದ್ರ ಏನೂ ಸಾಧನೆ ಮಾಡಿಲ್ಲ. ಅವರಪ್ಪ ಆಂಬ್ಯುಲೆನ್ಸ್ ಹಾಗೂ ಪೊಲೀಸ್ ಜೀಪ್‌ನಲ್ಲಿ ದುಡ್ಡು ತುಂಬಿಕೊಂಡು ಬಂದಿದ್ದರು. ಅದು ಯಾವ ರಾಜ್ಯದಿಂದ ಬಂದಿತೆಂದು ಕೇಳಬೇಕು ಎಂದು ಕಟುವಾಗಿ ಪ್ರತಿಕ್ರಿಯಿಸಿದರು. ರಾಘವೇಂದ್ರ ಮುನ್ಸಿಪಾಲಿಟಿಯಿಂದ ಬಂದವನು, ಅವನ ಚಿಂತನೆ ಕೂಡ ಅದೇ ಮಟ್ಟದದು. ನಾನು ನಮ್ಮ ಪಕ್ಷವನ್ನು ಗೆಲ್ಲಿಸಿದೊಕ್ಕೆ ಒಂದು ಸಲ ಬಿಹಾರಕ್ಕೆ ಹೋಗಿ ಬಂದಿದ್ದೇನೆ. ಅವಾಗ ಏನ್ ನಾನು ದುಡ್ಡು ತಗೊಂಡು ಹೋಗಿದ್ನಾ, ನಾನೇನು ಲೂಸಾ ಇವರ ಥರ. ಅವರ ವ್ಯವಸ್ಥೆ ಹೊಲಸು ಇರಬೇಕು ಎಂದು ರಾಘವೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ