Monday, November 17, 2025

Latest Posts

54 ವರ್ಷಗಳ ನಂತರ ಸಿಕ್ಕ ಬೆಲೆಕಟ್ಟಲಾಗದ ಸಂಪತ್ತು!

- Advertisement -

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಪ್ರಸಿದ್ಧ ಬಂಕಿ ಬಿಹಾರಿ ದೇವಾಲಯದ ಖಜಾನೆ ಕೋಶಗಳು 54 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಆದೇಶದಂತೆ ತೆರೆದಿವೆ. ಇದೇ ದಾಂತೇರಸ್‌ ದಿನದಂದು ದೇವಾಲಯದ ಸಂಪತ್ತಿನ ಕೋಶಗಳನ್ನು ತೆರೆಯಲಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠವು ಈ ಕೋಶಗಳನ್ನು ತೆರೆಯಲು ಸ್ಪಷ್ಟ ಆದೇಶ ನೀಡಿತ್ತು.

ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರ ನೇತೃತ್ವದಲ್ಲಿ, ಪ್ರಥಮ ದಿನದ ಪರಿಶೀಲನೆ ವೇಳೆ ಅಮೂಲ್ಯವಾದ ಚಿನ್ನ, ಬೆಳ್ಳಿ ಬಿಸ್ಕತ್ತುಗಳು, ಪಚ್ಚೆ ಕಲ್ಲುಗಳು, ವೈಢೂರ್ಯ, ನವರತ್ನಗಳಿಂದ ಜಡಿತವಾದ ಹಾರಗಳು, ರಾಜಮನೆತನದಿಂದ ಬಂದ ಕಾಣಿಕೆಗಳು ಹಾಗೂ ಹಳೆಯ ಭೂ ದಾಖಲೆಗಳು ಪತ್ತೆಯಾಗಿದೆ.

ಅರ್ಚಕ ದಿನೇಶ್ ಗೋಸ್ವಾಮಿ ಅವರು ನೀಡಿದ ಮಾಹಿತಿ ಪ್ರಕಾರ, 3 ರಿಂದ 4 ಅಡಿ ಉದ್ದದ ಚಿನ್ನ ಮತ್ತು ಬೆಳ್ಳಿಯ ಬಿಸ್ಕತ್ತುಗಳು ಪತ್ತೆಯಾಗಿವೆ. ನವಿಲಿನ ಆಕಾರದ ಪಚ್ಚೆ ಹಾರ, ನವರತ್ನಗಳಿಂದ ಅಲಂಕರಿತವಾದ ಬಂಗಾರದ ಕಲಶ, ಬೆಳ್ಳಿ ಶೇಷನಾಗ ಸೇರಿದಂತೆ ಅಪರೂಪದ ಲೋಹದ ವಸ್ತುಗಳು ಈ ತೋಷಖಾನೆಯಲ್ಲಿ ಸಂಗ್ರಹವಾಗಿವೆ.

ಮೊಹರು ಮಾಡಿದ ಪತ್ರಗಳು ಮತ್ತು 19ನೇ ಶತಮಾನದ ದೇವಾಲಯದ ಉಡುಗೊರೆಗಳನ್ನು ಒಳಗೊಂಡಿರುವ ಅಪರೂಪದ ನಿಧಿಗಳನ್ನು ಹೊಂದಿದೆ ಎಂದು ಹೇಳಲಾಗಿದೆ. 1864 ರಲ್ಲಿ ನಿರ್ಮಿಸಲಾದ ಈ ಖಜಾನೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ.

ಈ ಕೋಶಗಳನ್ನು ಕೊನೆಯದಾಗಿ 1971ರಲ್ಲಿ ತೆರೆಯಲಾಗಿತ್ತು. ಬ್ಯಾಂಕ್ ಲಾಕರ್‌ಗೆ ಆಭರಣಗಳನ್ನು ಸ್ಥಳಾಂತರಿಸಿದ ಬಳಿಕ, ಈ ಕೋಶಗಳನ್ನು ಮೊಹರು ಮಾಡಲಾಗಿತ್ತು. ಅದಕ್ಕೂ ಮುಂಚೆ, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ 1926 ಮತ್ತು 1936ರಲ್ಲಿ ಎರಡು ದೊಡ್ಡ ಕಳ್ಳತನಗಳು ನಡೆದಿದ್ದರೂ, ಸಂಪೂರ್ಣ ಸಮೀಕ್ಷೆ ಆಗಿರಲಿಲ್ಲ.

ಈ ಬೆಳವಣಿಗೆ 2011ರಲ್ಲಿ ಕೇರಳದ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಖಜಾನೆ ತೆರೆಯಲಾಗಿದ್ದ ವೇಳೆ ಕಂಡ ಅಮೂಲ್ಯ ಸಂಪತ್ತನ್ನು ನೆನಪಿಗೆ ತರುತ್ತದೆ. ಇದೀಗ ಬಂಕಿ ಬಿಹಾರಿ ದೇವಸ್ಥಾನವೂ ದೇಶದ ಪ್ರಮುಖ ಐತಿಹಾಸಿಕ ಧಾರ್ಮಿಕ ಸಂಪತ್ತುಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss