ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಪಟಾಕಿ ಸಿಡಿತದಿಂದ ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಹಾಗೂ ಯುವಕರು. ಬೆಂಗಳೂರಿನಲ್ಲಿ ಮಾತ್ರ 85ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಯ ಹಂಗಾಮಿನ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ.
ಹಸಿರು ಪಟಾಕಿಗಳ ನಿರ್ಲಕ್ಷ್ಯ ಮತ್ತು ಮಳೆಯ ವಾತಾವರಣದಲ್ಲಿ ಅಜಾಗರೂಕತೆ ಗಾಯಗಳ ಪ್ರಮಾಣ ಹೆಚ್ಚಿಸಿದೆ. ಚಿಕ್ಕ ಪಟಾಕಿಗಳು, ಫ್ಲವರ್ ಪಾಟ್, ಆಟಂ ಬಾಂಬ್ ಮುಂತಾದವುಗಳಿಂದ ಗಾಯಗಳಾಗಿವೆ. ವಾಯುಮಾಲಿನ್ಯವೂ ಹೆಚ್ಚಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 28 ಜನರಿಗೆ ಚಿಕಿತ್ಸೆ, ಇಬ್ಬರು ಮಕ್ಕಳು ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ 46 ಜನರಿಗೆ ಚಿಕಿತ್ಸೆ, ಆರು ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ 3 ಮಕ್ಕಳು ಚಿಕಿತ್ಸೆ ಪಡೆದಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 13 ಜನ ಅಂದ್ರೆ 5 ಮಕ್ಕಳು, 8 ವಯಸ್ಕರು, ಒಬ್ಬರಿಗೆ ಗಂಭೀರ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಮೈಸೂರಿನ K.R ಆಸ್ಪತ್ರೆಯಲ್ಲಿ 4 ಮಂದಿ ಚಿಕಿತ್ಸೆ ಪಡೆದಿದ್ದಾರೆ.
ರಾಜಾಜಿನಗರ ಘಟನೆಯಲ್ಲಿ 10 ವರ್ಷದ ಬಾಲಕನಿಗೆ ಮುಖದ ಬಳಿ ಪಟಾಕಿ ಸಿಡಿದು ಕಣ್ಣಿಗೆ ತೀವ್ರ ಗಾಯವಾಗಿದೆ. ರೆಪ್ಪೆಯ ಕೂದಲು ಸುಟ್ಟು, ಕಾರ್ನಿಯಾ ಮೇಲೆ ಮಸಿಯ ಕಣಗಳು ಅಂಟಿಕೊಂಡಿದ್ದು, ತುರ್ತು ಚಿಕಿತ್ಸೆಗೆ ಒಳಪಡಿಸಲಾಗಿದೆ. ಗಾಯಗೊಂಡವರಲ್ಲಿ ಶೇ.50ರಷ್ಟು ಪ್ರಕರಣಗಳು ಚಿಕ್ಕದಾದ ‘ಬಿಜಿಲಿ’ ಪಟಾಕಿಯಿಂದ ಸಂಭವಿಸಿವೆ.
ಇನ್ನುಳಿದಂತೆ ಫ್ಲವರ್ ಪಾಟ್, ಆಟಂ ಬಾಂಬ್, ಲಕ್ಷ್ಮೀ ಪಟಾಕಿ ಮತ್ತು ರಾಕೆಟ್ ಪಟಾಕಿಗಳಿಂದಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಮಳೆಯ ವಾತಾವರಣದಲ್ಲಿ ತೇವಾಂಶ ತಕ್ಷಣ ಪಟಾಕಿಗಳಲ್ಲಿ ಹೀರಿಕೊಂಡು, ಸಮಯಕ್ಕೆ ಸರಿಯಾಗಿ ಬೆಂಕಿ ಅಂಟದ ಕಾರಣ, ಪುನಃ ಹತ್ತಿರ ಹೋಗುವಾಗ ಅವು ಸಿಡಿದು ಕಣ್ಣಿಗೆ ಅಥವಾ ಮುಖಕ್ಕೆ ತೀವ್ರ ಗಾಯ ಉಂಟುಮಾಡಿವೆ. ಕಣ್ಣಿಗೆ ಗಾಯ ಮಾಡಿಕೊಂಡವರಲ್ಲಿ ಪುರುಷರೇ ಹೆಚ್ಚಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ