Thursday, October 23, 2025

Latest Posts

ನೆಕ್ಸ್ಟ್ ಸಿಎಂ ‘ಸಾಹುಕಾರ’ ಡಿಕೆಶಿ ರಿಯಾಕ್ಷನ್ ಏನು!?

- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಸತೀಶ್ ಜಾರಕಿಹೊಳಿ ಅವರು ಪ್ರಗತಿಪರ ಹಾಗೂ ಸೈದ್ಧಾಂತಿಕ ನಾಯಕತ್ವ ನೀಡಬಲ್ಲ ವ್ಯಕ್ತಿ ಎಂದು ಯತೀಂದ್ರ ಹೇಳಿದ್ದಾರೆ. ಅವರ ಮಾತುಗಳು ಮುಂದಿನ ಮುಖ್ಯಮಂತ್ರಿ ಕುರಿತು ಊಹಾಪೋಹಗಳಿಗೆ ಕಾರಣವಾಗಿವೆ.

ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಕಪ್ಪಲ್ಗುರಿ ಗ್ರಾಮದಲ್ಲಿ ನಡೆದ ಸಂತ ಕನಕದಾಸರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಯತೀಂದ್ರ ಮಾತನಾಡಿದ್ದಾರೆ. ನನ್ನ ತಂದೆ ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ. ಕರ್ನಾಟಕಕ್ಕೆ ಈಗ ಪ್ರಗತಿಪರ ಮತ್ತು ಸೈದ್ಧಾಂತಿಕ ಮನೋಭಾವದ ನಾಯಕರು ಬೇಕು. ಸತೀಶ್ ಜಾರಕಿಹೊಳಿ ಈ ಜವಾಬ್ದಾರಿಯನ್ನು ನಿಭಾಯಿಸಲು ಸಂಪೂರ್ಣವಾಗಿ ಸಮರ್ಥರಾಗಿದ್ದಾರೆ. ಅವರು ರಾಜ್ಯವನ್ನು ಮಾದರಿಯಾಗಿ ಮುನ್ನಡೆಸಬಲ್ಲರು ಎಂದು ಪ್ರಶಂಸಿಸಿದ್ದಾರೆ.

ಯತೀಂದ್ರ ಅವರ ಈ ಹೇಳಿಕೆಯಿಂದ ರಾಜ್ಯದ ರಾಜಕೀಯ ವಲಯಗಳಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆ ಕುರಿತು ಚರ್ಚೆ ತೀವ್ರಗೊಂಡಿದೆ. ಕೆಲವರು ಇದನ್ನು ‘ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ’ ಎಂಬ ಸುಳಿವಾಗಿ ಪರಿಗಣಿಸುತ್ತಿದ್ದಾರೆ.

ಇದಕ್ಕೆ ಜೊತೆಯಾಗಿ ಯತೀಂದ್ರ ಅವರು ತಮ್ಮ ಭಾಷಣದಲ್ಲಿ ‘ನವೆಂಬರ್ ಕ್ರಾಂತಿ’ ಕುರಿತು ಮಾತನಾಡಿದ್ದರಿಂದ ಹೊಸ ರಾಜಕೀಯ ಬೆಳವಣಿಗೆಗಳ ಸಾಧ್ಯತೆಯ ಕುರಿತೂ ಊಹಾಪೋಹಗಳು ಶುರುವಾಗಿದೆ. ಇನ್ನು ಯತೀಂದ್ರ ಹೇಳಿಕೆಯ ಬಗ್ಗೆ ಪತ್ರಕರ್ತರು ಕೇಳಿದಾಗ, ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.

ಯತೀಂದ್ರ ಅವರು ಏನು ಹೇಳಿದ್ದಾರೆ ಎಂಬುದನ್ನು ನೀವು ಅವರನ್ನೇ ಕೇಳಬೇಕು. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಪಕ್ಷದ ಹೈಕಮಾಂಡ್‌ಗೆ ವಿಧೇಯರಾಗಿದ್ದೇವೆ. ನಮ್ಮಲ್ಲಿ ನಾಯಕತ್ವದ ವಿಷಯವಾಗಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ. ಯತೀಂದ್ರ ಅವರ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್‌ನ ಒಳಗಿನ ರಾಜಕೀಯ ಚಟುವಟಿಕೆಗಳಿಗೆ ಹೊಸ ಚೈತನ್ಯ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಈ ಹೇಳಿಕೆಯ ರಾಜಕೀಯ ಪರಿಣಾಮ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss