ಇಷ್ಟು ದಿನ 5 ವರ್ಷ ನಾನೇ ಸಿಎಂ ಅಂತಾ ಹೇಳ್ತಿದ್ದ ಸಿದ್ದರಾಮಯ್ಯ, ಈಗ ಎಲ್ಲವನ್ನೂ ಹೈಕಮಾಂಡ್ ಮೇಲೆ ಹಾಕಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡಿದರೆ 5 ವರ್ಷ ತಾವೇ ಸಿಎಂ ಆಗಿ ಮುಂದುವರೆಯುವುದಾಗಿ ಹೇಳಿದ್ದಾರೆ. ಒಂದಲ್ಲ.. ಎರಡೆರಡು ಬಾರಿ ಹೈಕಮಾಂಡ್ ತೀರ್ಮಾನ ಮಾಡಿದ್ರೆ ಅನ್ನೋ ಮಾತನ್ನ ಹೇಳಿದ್ದಾರೆ.
ಇದು ನವೆಂಬರ್ ಕ್ರಾಂತಿಗೆ ಮತ್ತಷ್ಟು ಪುಷ್ಠಿ ಕೊಟ್ಟಿದ್ದು, ಸಿದ್ದು ನಡವಳಿಕೆ ನೋಡ್ತಿದ್ರೆ ಪವರ್ ಶೇರಿಂಗ್ ಫಿಕ್ಸ್ ಅನ್ನೋ ಅನುಮಾನ ಹುಟ್ಟು ಹಾಕಿದೆ.
ಕೆಲ ತಿಂಗಳ ಹಿಂದೆ ದೆಹಲಿಯಲ್ಲೇ ಕುಳಿತು, ಮುಂದಿನ 5 ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಘರ್ಜಿಸಿದ್ರು. ಆದ್ರೀಗ ಹೈಕಮಾಂಡ್ ತೀರ್ಮಾನಿಸಿದ್ರೆ ಮಾತ್ರ ಎಂದು ಹೇಳಿದ್ದಾರೆ. ಇದನ್ನ ಗಮನಿಸಿದ್ರೆ ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಅನ್ಸುತ್ತೆ. ಹೈಕಮಾಂಡ್ ಕೂಡ ನಾಯಕತ್ವ ಬದಲಾವಣೆಗೆ ಒಲವು ತೋರಿದೆಯಾ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಇದೇ ವೇಳೆ ಸಿಎಂ ಸ್ಥಾನದ ಆಕಾಂಕ್ಷಿಗಳ ವಿಚಾರವಾಗಿಯೂ ಸಿದ್ದು ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧೆಯಲ್ಲಿ ಇರಬೇಡಿ ಎಂದು ಹೇಳಲು ಆಗಲ್ಲ. ನಾನು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂದು ಹೇಳಿಕೊಳ್ಳುವುದು ಅವರ ಹಕ್ಕು. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ.
ಪದೇ ಪದೇ ಸಿಎಂ ಬದಲಾವಣೆ ವಿಷಯ ಚರ್ಚೆಗೆ ಬರುತ್ತಿದೆಯಲ್ವಾ ಅಂತಾ ಮಾಧ್ಯಮಗಳು ಪ್ರಶ್ನಿಸಿದ್ರು. ಇದಕ್ಕೆ ಹಾಸ್ಯಮಯವಾಗೇ ಸಿಎಂ ಮಾತನಾಡಿದ್ದು, ನೀವು ಪದೇ ಪದೇ ಕೇಳೋದಕ್ಕೆ ಪದೇ ಪದೇ ಚರ್ಚೆಗೆ ಬರುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ರು.
5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂಬ ಕೆ.ಎನ್. ರಾಜಣ್ಣ ಹೇಳಿಕೆಗೂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅದು ಅವರ ಸ್ವಂತ ಅಭಿಪ್ರಾಯ ಎಂದಷ್ಟೇ ಹೇಳಿ ಸಿದ್ದರಾಮಯ್ಯ ಸೈಲೆಂಟ್ ಆದ್ರು. ಒಟ್ನಲ್ಲಿ ಪವರ್ ಶೇರಿಂಗ್ ವಿಚಾರ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ. ಎಲ್ಲಾ ನಿರ್ಧಾರಗಳನ್ನು ವರಿಷ್ಠರ ಮೇಲೆ ಹಾಕಿ, ಸಿದ್ದರಾಮಯ್ಯ ಕಾಯುವಂತಾಗಿದೆ.

